ಜಾನಪದ ಕಲೆಗಳನ್ನು ಉಳಿಸುವ ಕೆಲಸ ಅನನ್ಯ: ತಹಶೀಲ್ದಾರ್ ಪ್ರಕಾಶ ಸಿಂದಗಿ

164

ಪ್ರಜಾಸ್ತ್ರ ಸುದ್ದಿ

ಸಿಂದಗಿ: ನವರಾತ್ರಿ ಪ್ರಯುಕ್ತ ಪಟ್ಟಣದ ಬಸವ ಮಂಟಪದಲ್ಲಿ ಅಕ್ಟೋಬರ್ 22ರ ಸಂಜೆ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ‘ಪದ ಕೇಳೋಣ ಬರ್ರಿ’ ಅನ್ನೋ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವರ ಹಿಪ್ಪರಗಿಯ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಅಂಬಾ ಭವಾನಿ ಭಕ್ತಿ ಗೀತೆ ಬಿಡುಗಡೆಗೊಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು, ಮಾಧ್ಯಮರಂಗ ಫೌಂಡೇಶನ್ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳ್ಳೆಯ ರೀತಿಯಿಂದ ಮಾಡಿಕೊಂಡು ಬರುತ್ತಿದೆ. ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತಿರುವ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಹಾಗೂ ಪದಾಧಿಕಾರಿಗಳಿಗೆಲ್ಲ ಅಭಿನಂದನೆಗಳು ಎಂದರು.

ಎಂ.ಬಿ ಅಲ್ದಿ ಅವರಿಂದ ಗಾಯನ

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರು, ಹಿರಿಯ ಲೇಖಕ ಎಂ.ವಿ ಗಣಾಚಾರಿ ಅವರು, ಪ್ರಾಧ್ಯಾಪಕ ವೃತ್ತಿಯ ಸಂದರ್ಭದಲ್ಲಿ ಹಲವಾರು ಸಾಮಾಜಿಕ ನಾಟಕಗಳನ್ನು ಮಾಡಿದ್ದೇವೆ. ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಿದ್ದೇವು. ಅದನ್ನು ಉಳಿದವರು ಮುಂದುವರೆಸಿಕೊಂಡು ಹೋಗಲಿಲ್ಲ. ಈಗ ಮಾಧ್ಯಮರಂಗ ಫೌಂಡೇಶನ್ ಆ ಕೆಲಸ ನಿರಂತರವಾಗಿ ಮಾಡುತ್ತಿದೆ. ಅವರಿಗೆ ಶುಭವಾಗಲಿ ಅಂತಾ ಹೇಳಿದರು.

ಐಶ್ವರ್ಯ ಕೊಳಾರಿ ಅವರಿಂದ ಗಾಯನ

ಇನ್ನೋರ್ವ ಮುಖ್ಯ ಅತಿಥಿ ತಳವಾರ ನೌಕರರ ಮಹಾಸಭಾದ ತಾಲೂಕಾಧ್ಯಕ್ಷ ಭರತೇಶ ಹಿರೋಳ್ಳಿ ಮಾತನಾಡಿ, ಸಿಂದಗಿ ಭಾಗದಲ್ಲಿ ನಾಟಕ, ಸಾಹಿತ್ಯ, ಸಂಗೀತದ ಕೆಲಸ ಮಾಡುತ್ತಿರುವ ಮಾಧ್ಯಮರಂಗ ಫೌಂಡೇಶನ್ ಸಾಕಷ್ಟು ಭರವಸೆ ಮೂಡಿಸಿದೆ. ಧಾರವಾಡ, ಬೆಂಗಳೂರು, ಮೈಸೂರು ಭಾಗದ ಸ್ನೇಹ ಬಳಗ ಇದರಲ್ಲಿದ್ದು, ಅವರಿಗೆ ನಮ್ಮ ಬೆಂಬಲ ಸದಾ ಇರುತ್ತೆ ಎಂದರು.

ಸಂಗೀತ ಸಂಜೆ ನಡೆಸಿಕೊಟ್ಟ ಮಹಾದೇವ ಪತ್ತಾರ(ತಬಲಾ) ಗಾಯಕರಾದ ಭೀಮರಾಯ ಬಡಗೇರ, ಐಶ್ವರ್ಯ ಕೊಳಾರಿ, ಎಂ.ಬಿ ಅಲ್ದಿ, ನಾನಾಗೌಡ ಪಾಟೀಲ, ಕಿರಣ ನಾವಿ ಅವರಿಗೆ ಸನ್ಮಾನಿಸಲಾಯಿತು.

ಈ ವೇಳೆ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯೆ ರೇಣುಕಾ ನವೀನ ಹಿಪ್ಪರಗಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಪತ್ರಕರ್ತರಾದ ರವಿ ಮಲ್ಲೇದ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನಿಂಗಣ್ಣ ಬೂದಿಹಾಳ, ರಾಜೇಶ್ವರಿ, ಜಯಶ್ರೀ, ಗೌರಿ, ಸುದೀಪ, ಶ್ರೇಯಸ, ರಾಜಶೇಖರ ಶೆಟ್ಟಿ, ಸಂಜೀವಕುಮಾರ ಡಾಂಗಿ, ಲಕ್ಕಣ್ಣ ಬೀರಗೊಂಡ, ಶಿವಾನಂದ ಶಾಹಪೂರ, ಬಸವರಾಜ ಭೂತಿ, ಬಸವರಾಜ ಕುರನಳ್ಳಿ, ರಾಜು ಹಿರೇಕುರುಬರ, ಶಿವಾನಂದ ಕಲಬುರಗಿ, ಗಂಗಾಧರ ವಿಶ್ವಕರ್ಮ ಸೇರಿದಂತೆ ಅನೇಕರು ಹಾಜರಿದ್ದರು. ಉಪನ್ಯಾಸಕ, ಲೇಖಕ ಅಶೋಕ ಬಿರಾದರ ನಿರೂಪಿಸಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!