ಸಿಂದಗಿ ತಾಲೂಕಿನಲ್ಲಿ ಪಪ್ಪಾಯಿಗೆ ‘ಕರೋನಾ’ಯೇಟು

966

ಸಿಂದಗಿ: ಡೆಡ್ಲಿ ಕರೋನಾದಿಂದ ಪ್ರತಿಯೊಬ್ಬರ ಜೀವನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಅನ್ನೋ ಗಾದೆ ಮಾತಿದೆ. ಹೀಗಾಗಿ ಲಾಕ್ ಡೌನ್ ನಿಂದ ಎಷ್ಟು ದಿನ ಕುಳಿತು ಉಣ್ಣಲು ಸಾಧ್ಯ ಹೇಳಿ. ಕಾರ್ಮಿಕರು, ಕೃಷಿಕರು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು ದುಸ್ತರವಾಗಿದೆ. ಅದರಂತೆ ತಾಲೂಕಿನ ರೈತರೊಬ್ಬರು ಪಪ್ಪಾಯಿ ಬೆಳೆದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ತಾಲೂಕಿನ ಯರಗಲ್ಲ ಬಿ.ಕೆ ಗ್ರಾಮದ ಅರವಿಂದ ಹಂಗರಗಿ ಅನ್ನೋ ರೈತ, ಇದೀಗ ಕಂಗಾಲಾಗಿದ್ದಾರೆ. ಕಾರಣ, ನಾಲ್ಕು ಎಕರೆ ಹೊಲದಲ್ಲಿ ಬೆಳೆದ ಪಪ್ಪಾಯಿ ಮಾರಾಟವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ನಿಂದಾಗಿ ಎಲ್ಲಿಯೂ ಪೂರೈಕೆ ಮಾಡಲು ಆಗದ ಕಾರಣ ಪಪ್ಪಾಯಿ ಹಾಳಾಗ್ತಿದೆ. ಹೀಗಾಗಿ ರೈತ ಅರವಿಂದ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ನರ್ದೇಶಕರನ್ನೂ ಸಹ ಸಂಪರ್ಕಿಸಿ ತಮ್ಮ ನೋವನ್ನ ಹಂಚಿಕೊಂಡಿದ್ದಾರೆ. ಆದ್ರೆ, ಸಧ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಸಹ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲದಂತಾಗಿದೆ.

ಲಾಕ್ ಡೌನ್ ಪೂರ್ವದಲ್ಲಿ ಒಂದು ಕೆಜಿ ಪಪ್ಪಾಯಿಗೆ ಸುಮಾರು 40 ರೂಪಾಯಿಗೆ ಮಾರಾಟವಾಗ್ತಿತ್ತು. 4 ಎಕರೆ ಹೊಲದಲ್ಲಿ ಬೆಳೆದ ಪಪ್ಪಾಯಿಗೆ ಕೆಜಿಗೆ 10 ರೂಪಾಯಿ ಮಾರಿದ್ರೂ 7 ರಿಂದ 8 ಲಕ್ಷ ರೂಪಾಯಿ ಬರುತಿತ್ತು. ಆದ್ರೆ, ಇದೀಗ ಅದೆಲ್ಲದಕ್ಕೂ ಕಲ್ಲು ಬಿದ್ದಿದೆ. ಅಂತರಾಜ್ಯ ಗಡಿಗಳು ಬಂದ್ ಆಗಿರುವ ಕಾರಣ, ಹಣ್ಣುಗಳು ಹೊರರಾಜ್ಯಗಳಿಗೆ ಕಳಿಸಲು ಆಗ್ತಿಲ್ಲ. ಅಲ್ಲದೆ, ಇತರೆ ಜಿಲ್ಲೆಗಳಿಗೂ ಹಣ್ಣುಗಳು ಮಾರಾಟವಾಗ್ತಿಲ್ಲ. ಇದರ ಪರಿಣಾಮ ಪಪ್ಪಾಯಿಗಳು ಗಿಡದಲ್ಲಿಯೇ ಕೊಳೆತು ಹಾಳಾಗ್ತಿವೆ. ಸಂಬಂಧಪಟ್ಟವರು ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.

ಇದೆ ರೀತಿ ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜ್, ಮಾವಿನ ಹಣ್ಣು, ಕುಂಬಳಕಾಯಿ ಸೇರಿದಂತೆ ಇತರೆ ಹಣ್ಣುಗಳನ್ನ ಬೆಳೆದ ರೈತರು ಮುಂದೇನು ಅನ್ನೋ ಚಿಂತಿ ಮಾಡ್ತಿದ್ದಾರೆ. ಇನ್ನು ಮೊನ್ನೆ ಬಿರುಗಾಳಿ ಸಮೇತ ಸುರಿದ ಮಳೆಯಿಂದ ನಿಂಬೆ, ಬಾಳೆಹಣ್ಣುಗಳು ಸಹ ನೆಲಕಚ್ಚಿವೆ. ಒಟ್ಟಿನಲ್ಲಿ ಕರೋನಾ ಅನ್ನೋದು ಬರೀ ಆರೋಗ್ಯದ ಮೇಲೆ ಅಲ್ಲ. ಜೀವನದ ಪ್ರತಿ ದುಡಿಮೆಯ ಮೇಲೆ ಬರೆ ಎಳೆದಿದೆ.




Leave a Reply

Your email address will not be published. Required fields are marked *

error: Content is protected !!