ಕಾವ್ಯ ಬರಿ ಪದವಲ್ಲ

1452

ಯಾರು ಬೇಕಾದರೂ ಕಾವ್ಯ ರಚಿಸಬಹುದೆ? ಉತ್ತರ ಹೌದು ಅಥವಾ ಅಲ್ಲ. ಭಾಷೆ ಬರುವ ಎಲ್ಲ ರಸಿಕರೂ ತಮ್ಮ ಶಾಬ್ದಿಕ ಸಂಪತ್ತನ್ನು ಬಳಸಿ ಕವಿತೆ ರಚಿಸಬಹುದು. ಕಾಗೆಯಾದರೇನು ಕೋಗಿಲೆಯಾದರೇನು, ತನಗೆ ಒಲಿದಂತೆ, ತನ್ನ ಸಂತಸಕ್ಕೆ ತಕ್ಕಂತೆ ಹಾಡುವುದಿಲ್ಲವೆ? ಹಾಗೆಯೇ ಇದು. ನವಿಲು ಕುಣಿಯುತ್ತದೆ ಎಂದು ಕೆಂಬೂತವು ಕುಣಿದರೆ ಚೆಂದ ಕಾಣುತ್ತದೆಯೇ? ಕೋಗಿಲೆ ಹಾಡುತ್ತದೆ ಎಂದು ಕಾಗೆಯೂ ಹಾಡಿದರೆ ಇಂಪಾಗಿರುತ್ತದೆಯೇ? ಕಾವ್ಯ ರಚನೆ ಎಂಬುದು ಒಂದು ಪ್ರತಿಭೆಯ ಪರಿಕ್ರಮ. ಪ್ರತಿಭೆಗೆ ತಕ್ಕ ಪರಿಶ್ರಮ (ವ್ಯುತ್ಪತ್ತಿ) ಕಾವ್ಯ ರಚನೆಗೆ ಇರಬೇಕಾಗುತ್ತದೆ. ಅದು ಕೆಲವೇ ಕೆಲವರಿಗೆ ದಕ್ಕಿದ ವರ.

ಜನಪದ ನುಡಿಯಾಗಿ ಹುಟ್ಟಿದ ಸೃಜನಶೀಲ ಕಾವ್ಯಕ್ಕೆ ಸಮುದಾಯ ಪ್ರಜ್ಞೆಯೇ ಪ್ರಧಾನವಾಗಿತ್ತು. ಅಲ್ಲಿ ವ್ಯಕ್ತಿ ನಿಮಿತ್ತಮಾತ್ರನಾಗಿದ್ದ. ಇಂದು ಕಾವ್ಯದ ಹಾದಿ ಅಂದಿನಂತಿಲ್ಲ…

ಇಂದಿನ ಲಿಪಿಕ ಸಮಾಜ ಕಟ್ಟಿಕೊಂಡ ಶಿಷ್ಟ ಸಾಹಿತ್ಯಕ್ಕೆ ಮೂಲ ತಾಯಿ ಜನಪದ ಸಾಹಿತ್ಯವೇ ಆಗಿದೆ. ಅಕ್ಷ ರಗಳ ಹಂಗಿಲ್ಲದ ಮನುಕುಲದ ಭಾವಾಭಿವ್ಯಕ್ತಿಯಾಗಿ ಹುಟ್ಟಿಕೊಂಡ ಹಾಡು, ಬದುಕಿನ ಪಾಡೇ ಆಗಿತ್ತು. ಅಕ್ಷ ರದ ಒಡಮೂಡುವಿಕೆಯಿಂದ ಜನಪದ ಸಾಹಿತ್ಯ ಲಿಪಿ ರೂಪವನ್ನು ಪಡೆಯುತ್ತ ಬಂದಿತು. ಹೀಗೆ ಮೊಳಕೆಯೊಡೆದ ಸಾಹಿತ್ಯದ ಮೊದಲ ಅಭಿವ್ಯಕ್ತಿಯ ಮಾಧ್ಯಮ ಕಾವ್ಯವೇ ಆಗಿತ್ತು. ಕಥೆ ಮಂದ ಚಲನೆಯ ವಿರಾಮದ ಪ್ರಕಾರವಾಗಿ ಹುಟ್ಟಿಕೊಂಡರೂ, ಕಾವ್ಯಕ್ಕೆ ಇರುವ ತೀವ್ರತೆ ಮತ್ತು ತುಡಿತ ಕಥನ ಪ್ರಕಾರಕ್ಕೆ ಇರಲಿಲ್ಲ. ಜನಪದ ನುಡಿಯಾಗಿ ಹುಟ್ಟಿದ ಸೃಜನಶೀಲ ಕಾವ್ಯಕ್ಕೆ ಸಮುದಾಯ ಪ್ರಜ್ಞೆಯೇ ಪ್ರಧಾನವಾಗಿತ್ತು. ಅಲ್ಲಿ ವ್ಯಕ್ತಿ ನಿಮಿತ್ತಮಾತ್ರನಾಗಿದ್ದ.

ಕಾವ್ಯಸೃಷ್ಟಿಗೆ ಒಂದು ಪ್ರೇರಣೆ ಇದ್ದೇ ಇರುತ್ತದೆ. ದೇಶಕಾಲದಲ್ಲಿ ಜರುಗುವ ಘಟನೆ, ವಿಷಯಗಳು ಕಾವ್ಯಕ್ಕೆ ವಸ್ತುವಾಗುತ್ತವೆ. ಪ್ರೇರಣೆ ಎಂಬುದು ಬಾಹ್ಯ ಅಥವಾ ಆಂತರಿಕವಾಗಿಯೂ ಇರುತ್ತದೆ. ಯಾವುದೇ ಸಮುದಾಯದಲ್ಲೂ ಘಟನೆಗಳು ಜರಗುತ್ತಲೇ ಇರುತ್ತವೆ. ಆಗ ಕವಿ ಸಮುದಾಯದ ಸಂವೇದನೆಯ ಕೇಂದ್ರದಲ್ಲಿ ನಿಂತುಕೊಂಡು ತನ್ನ ಸುತ್ತಲಿನ ಆಗುಹೋಗುಗಳಿಗೆ ಭಾಷ್ಯ ಬರೆಯುವ ಧೈರ್ಯ ಮತ್ತು ಸಾಮರ್ಥ್ಯ‌ವನ್ನು ಪಡೆದುಕೊಳ್ಳುತ್ತಾನೆ.


ಕಾವ್ಯ ರಚನೆಗೆ ನನ್ನಲ್ಲಿ ಪ್ರತಿಭೆ ಇದೆ ಎಂದ ತಕ್ಷ ಣ ಕವಿ ಏನನ್ನಾದರೂ ಗೀಚಲು ಸಾಧ್ಯವೆ? ತನಗೆ ತೋಚಿದ್ದನ್ನು, ಅಹಿತವಾದದ್ದನ್ನು ಕವಿ ರಚಿಸಿದರೆ ಅದು ಕಾವ್ಯದ ಆಶಯವನ್ನು ಹಾಳು ಮಾಡುತ್ತದೆ. ಆ ಮೂಲಕ ಕವಿ ತನ್ನ ಸ್ಥಾನವನ್ನು ತಾನೇ ಕಳೆದುಕೊಳ್ಳುತ್ತಾನೆ. ಹಾಗಾದರೆ ಕಾವ್ಯದ ಆಶಯ ಯಾವುದು? ಕಾವ್ಯ ರಚನೆಗೆ ಕುಳಿತಾಗ ಕವಿ ನಿರ್ವಿಕಲ್ಪನಾಗುತ್ತಾನೆ. ನ್ಯಾಯಾಧೀಶನ ಮನಸ್ಥಿತಿ ಆತನಿಗೆ ಬಂದೊದಗುತ್ತದೆ. ಯಾವುದೇ ರಾಗದ್ವೇಷಗಳಿಗೆ ಬಲಿಯಾಗದೆ ಕಾವ್ಯ ರಚನೆಗೆ ಕುಳಿತುಕೊಳ್ಳುತ್ತಾನೆ. ಆತನಿಗೆ ಸಮಾಜ, ಪ್ರಕೃತಿ, ಜೀವ ಸಂಕುಲದ ಬಗ್ಗೆ ಕಳಕಳಿ, ತಿಳಿವಳಿಕೆ, ಅಂತಃಕರಣ, ಸಂವೇದನೆ ಇರುತ್ತದೆ. ಸಾಂತ್ವನ, ಸಂದೇಶ, ಸಂತೋಷ, ಸುಖದುಖ, ರಣೋತ್ಸಾಹಗಳು ನವರಸಗಳೊಂದಿಗೆ ಬೆರೆತು ಕುಸುರಿಗೆ ಇಳಿಯುತ್ತವೆ.

ಪ್ರತಿಭಾಶಾಲಿಯಾದ ಕವಿಗೆ ಕಾವ್ಯದ ದಾರಿ ಹಲವು ಬಗೆಯದಾಗಿರುತ್ತದೆ; ಹರಿತ, ಲಲಿತ, ನಿಗೂಢ, ಮಾಧುರ‍್ಯ, ಮ್ಲಾನ ಎಂಬ ದಾರಿಗಳನ್ನು ಆತ ತನ್ನ ಕಾವ್ಯಕ್ಕೆ ತೋರಿಸಬಲ್ಲ. ಕವಿ ತನ್ನ ಕಾವ್ಯದ ಆಶಯಕ್ಕೆ ಮತ್ತು ಮೂಲದ್ರವ್ಯಕ್ಕೆ ದಕ್ಕೆಯಾಗದ ರೀತಿಯಲ್ಲ ತನ್ನ ಸಾಹಿತ್ಯೋಪಮೆಯನ್ನು ಬಳಸುತ್ತಾನೆ. ಕವಿತೆಗೆ ಶಬ್ದಾಡಂಬರಕ್ಕಿಂತ ಪರಿಕರ ಮತ್ತು ರೂಪಕಗಳು ಬಹಳ ಮುಖ್ಯವಾಗುತ್ತವೆ. ಹೇಳಬೇಕಾದ ವಿಷಯ ಅಥವಾ ಮುಟ್ಟಿಸಬೇಕಾದ ಸಂದೇಶವನ್ನು ಮನಃಪೂರ್ವಕವಾಗಿ ಮನಗಾಣಿಸುವುದಕ್ಕೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ಸಾಹಿತ್ಯ ಲೇಪನವನ್ನು ಒಬ್ಬ ಸಮರ್ಥ ಕವಿ ನಿರುಕಿಸುತ್ತಾನೆ. ಕಾವ್ಯ ರಚನೆಗಳಲ್ಲಿ ಆರಂಭದಿಂದಲೂ ನಾವು ಹಲವಾರು ಪ್ರಕಾರಗಳನ್ನು ಕಾಣುತ್ತೇವೆ; ಒಡ್ಡೋಲಗದ ಕಾವ್ಯ, ಧಾರ್ಮಿಕ ಕಾವ್ಯ, ಸಮಾನತೆಯ ಕಾವ್ಯ(ವಚನ, ತತ್ವಪದ) ಬೆವರುವಾಸನೆಯ ಕಾವ್ಯ(ದಲಿತ, ಬಂಡಾಯ) ಎಂದು ಅವುಗಳನ್ನು ಸ್ಥೂಲವಾಗಿ ವಿಂಗಡಿಸಬಹುದಾದರೂ ಮತಧರ್ಮ, ದೇಶಕಾಲ, ಸಂಸ್ಕೃತಿ, ನಾಗರಿಕತೆ, ವರ್ಣ, ಲಿಂಗ ಬೇಧಗಳ ಪ್ರಭಾವ ಕಾವ್ಯ/ಸಾಹಿತ್ಯ ರಚನೆಯ ಮೇಲೆ ಇದ್ದೇ ಇರುತ್ತದೆ. ಶಿಷ್ಟ ಪ್ರಕಾರದ(ಚಂಪೂ, ರಗಳೆ, ಷಟ್ಪದಿ, ಸಾಂಗತ್ಯ, ನವೋದಯ, ನವ್ಯ, ಸೃಜನಶೀಲ ಇತ್ಯಾದಿ) ಸಾಹಿತ್ಯದಲ್ಲಿ ರಚನೆಗೊಂಡ ಕಾವ್ಯಕ್ಕೆ ಅದರದೇಯಾದ ಕಾವ್ಯ ಲಕ್ಷ ಣಗಳು ಇರುತ್ತವೆ; ರಸ(ಭಾವ, ವಿಭಾವ, ಅನುಭಾವ, ಸಂಚಾರಿಭಾವ), ರೀತಿ(ಪದ ರಚನೆ, ವಿನ್ಯಾಸ), ಧ್ವನಿ(ಶಬ್ದಗಳ ಆಚೆಗಿನ ಅರ್ಥ) ಎಂದು ಅವುಗಳನ್ನು ಲಾಕ್ಷ ಣಿಕರು ಪದಗ್ರಹಿಸುತ್ತಾರೆ. ಸಾಹಿತ್ಯದ ಇತರ ಪ್ರಕಾರಗಳಿಗಿಂತ ಕಾವ್ಯದಲ್ಲಿ ಭಾಷೆಯ ರಚನೆ ಬಿಗಿಯಾಗಿರುತ್ತದೆ. ಅದರ ಘಟಕಾಂಶಗಳಾದ-ನಾದ, ಅರ್ಥ, ಧ್ವನಿ, ಪದಜೋಡಣೆ, ಲಯ ಮುಂತಾದವು ನಿಕಟವಾಗಿ ಹೆಣೆದುಕೊಂಡಿರುತ್ತವೆ. ಕಿರಿದರಲ್ಲಿ ಹಿರಿದಾದ ಅರ್ಥ ಮತ್ತು ಭಾವವನ್ನು ದಿಗ್ದರ್ಶಿಸುತ್ತವæ. ಹೀಗಾಗಿ ಕಾವ್ಯವೆಂದರೆ ಅದು ಸುಮ್ಮನೆ ಪದ ಜೋಡಣೆಯಾಗಲಿ, ಶಬ್ದಾಡಂಬರವಾಗಲಿ ಅಲ್ಲ.




Leave a Reply

Your email address will not be published. Required fields are marked *

error: Content is protected !!