ದಿ.ಶಿವಾನಂದ ಪಾಟೀಲ ಪತ್ನಿ ಸಿಂದಗಿ ಜೆಡಿಎಸ್ ಅಭ್ಯರ್ಥಿ

271

ಪ್ರಜಾಸ್ತ್ರ ಸುದ್ದಿ

ಸಿಂದಗಿ: 2023ರ ವಿಧಾನಸಭಾ ಚುನಾವಣೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ ಸೋಮಜಾಳ ಅವರ ಪತ್ನಿ ವಿಶಾಲಾಕ್ಷಿ ಅವರನ್ನು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದರು.

ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಸೋಮಜಾಳ ಅವರು ಜ.20ರ ರಾತ್ರಿ ಅಕಾಲಿಕ ನಿಧನ ಹೊಂದಿದರು. ಹೀಗಾಗಿ ಪಟ್ಟಣದಲ್ಲಿ ಅವರಿಗೆ ಇಂದು ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಬರೀ ಮಾತುಗಳಿಂದ ಈ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಾನು ಮೊಟಕುಗೊಳಿಸಲು ಸಿದ್ಧನಿಲ್ಲ. ನನ್ನ 123ರ ಕನಸಿಗೆ ಬೆಂಬಲವಾಗಿ ನಿಲ್ಲುತ್ತೇನೆ. ನಾನು ಶಾಸಕನಾಗಿ ನಿಮಗೆ ಶಕ್ತಿ ತುಂಬುತ್ತೇನೆ ಎಂದು ಹೇಳಿದ್ದ ಶಿವಾನಂದ ಪಾಟೀಲ ಅವರಿಗೆ ನಿಜವಾಗಿ ಶ್ರದ್ಧಾಂಜಲಿ ಸಲ್ಲಿಸುವುದಾದರೆ ನನ್ನ ತಂಗಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಹೇಳುವ ಮೂಲಕ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದರು.

ಸಿಂದಗಿ ಕ್ಷೇತ್ರದ ಜನತೆಯಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ಲೂಟಿ ಹೊಡೆಯುವ ಶಾಸಕರನ್ನು, ಸರ್ಕಾರವನ್ನು ನೋಡುತ್ತಿದ್ದೇವೆ. ಈ ಚುನಾವಣೆಯನ್ನು ನಡೆಸಲು ಅಣ್ಣನಾಗಿ ಈ ತಂಗಿಯ ಜೊತೆಗೆ ಇರುತ್ತೇನೆ. ಈ ಸೈನಿಕನ ಮೇಲೆ ನಿಜವಾದ ಅಭಿಮಾನ ಇದ್ದರೆ ಇವರಿಗೆ ಆಶೀರ್ವಾದ ಮಾಡಿ. ನಾನು ಸಿಂದಗಿಯನ್ನು ದತ್ತು ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

ಮನಗೂಳಿ ಅವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇದ್ದಾಗ 2018ರ ಚುನಾವಣೆಯಲ್ಲಿ ಅವರಿಬ್ಬರ ಮಕ್ಕಳಿಗೆ ನಾನು ಒಂದು ಮಾತು ಹೇಳಿದೆ. ಶಾಸಕರಾಗಬೇಕೆಂದು ನಿಮ್ಮಲ್ಲಿ ಪೈಪೋಟಿ ಬೇಡ. ರಾಮ, ಲಕ್ಷ್ಮಣರ ರೀತಿ ನಿಮ್ಮ ತಂದೆಯವರ ಕೊನೆಯ ಚುನಾವಣೆ ಗೆಲ್ಲಿಸುವ ರೀತಿಯಲ್ಲಿ ಕೆಲಸ ಮಾಡಿ. ಸಚಿವರಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟೆ. ನೀವು ಕೈ ಹಿಡಿದಿರಿ. ಅವರನ್ನು ಮಂತ್ರಿ ಮಾಡಿದೆ. ದೇವೇಗೌಡರು ಹಾಗೂ ಮನಗೂಳಿ ಅವರಿಗೆ ಸಂಬಂಧ ಮುಖ್ಯವಿತ್ತು. ಅಧಿಕಾರ ಮುಖ್ಯವಿರಲಿಲ್ಲ. ಮಕ್ಕಳಿಗೆ ಅಧಿಕಾರ ಬೇಕಿತ್ತು. ಹೀಗಾಗಿ ಆ ಸಂಬಂಧ ಕಳೆದುಕೊಳ್ಳುವ ಕೆಲಸ ಮಾಡಿದರು. ಅದು ದೊಡ್ಡ ಮಟ್ಟದ ನೋವಾಯಿತು ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ಹೋದ ಅಶೋಕ ಮನಗೂಳಿ ಅವರನ್ನು ಪರೋಕ್ಷವಾಗಿ ಕುಟುಕಿದರು.

ಈ ವೇಳೆ ಶಿವಾನಂದ ಪಾಟೀಲ ಅವರ ಪತ್ನಿ ವಿಶಾಲಾಕ್ಷಿ, ಶಾಸಕರಾದ ಬಂಡೆಪ್ಪ ಕಾಶಂಪೂರ, ದೇವಾನಂದ ಚೌವ್ಹಾಣ, ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ, ಹಿರಿಯ ನಾಯಕ ಬಿ.ಡಿ ಪಾಟೀಲ ಸೇರಿ ಇತರರು ಅಗಲಿದ ನಾಯಕನಿಗೆ ನುಡಿನಮನ ಸಲ್ಲಿಸಿದರು. ವೇದಿಕೆ ಮೇಲೆ ಶಿವಾನಂದ ಪಾಟೀಲರ ಪುತ್ರ ರಕ್ಷಿತ್, ಸಹೋದರ, ಮಗಳು, ವಿಜಯಪುರ, ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ, ಇಂಡಿ ಭಾಗದ ಜೆಡಿಎಸ್ ನಾಯಕರು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!