ಸಂವಿಧಾನ ಬದಲಿಸಲು ದೇಶದ ಜನ ಅವಕಾಶ ನೀಡಲ್ಲ: ಸಿದ್ದರಾಮಯ್ಯ

265

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಬಿಜೆಪಿ ಹಾಗೂ ಆರ್ ಎಸ್ಎಸ್ ಹಿಟ್ಲರ್ ಸಿದ್ಧಾಂತ ಹೊಂದಿವೆ. ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ ಎಂದು ಹೇಳುತ್ತಾ ದೇಶ ಒಡೆಯುವ, ಸಂವಿಧಾನ ಬದಲಿಸುವ ಕೆಲಸ ಮಾಡುತ್ತಿವೆ. ಆದರೆ, ದೇಶದ ಜನತೆಗೆ ಅದಕ್ಕೆ ಅವಕಾಶ ಕೊಡುವುದಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ತಮ್ಮ 75ನೇ ಜನುಮ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು, ಅಭಿಮಾನಿಗಳು ಆಯೋಜಿಸಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಇದುವರೆಗೂ ಹುಟ್ಟು ಹಬ್ಬ ಮಾಡಿಕೊಂಡಿಲ್ಲ. ನಮ್ಮ ಮುಖಂಡರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಇಂದು 75ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದೇನೆ. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.

ಸುಮಾರು 54 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂಥಾ ಕೋಮುವಾದಿ ಸರ್ಕಾರವನ್ನು ಎಂದಿಗೂ ನೋಡಿಲ್ಲ. ನನ್ನ ಐದು ವರ್ಷಗಳ ಆಡಳಿತದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ. ಇದು ಇಡೀ ದೇಶದಲ್ಲಿಯೇ ದಾಖಲೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸುಕನ್ಯಾ ಸಮೃದ್ಧಿ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದ್ರೆ, ಮೋದಿ ಸರ್ಕಾರ 75 ವರ್ಷಗಳಲ್ಲಿದ್ದ ದೇಶದ ಸಾಲವನ್ನು ಕಳೆದ 8 ವರ್ಷಗಳಲ್ಲಿ ನೂರು ಲಕ್ಷ ಕೋಟಿಗೂ ಅಧಿಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾನು ಡಿ.ಕೆ ಶಿವಕುಮಾರ್ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವದಲ್ಲಿ 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದರು. ಇನ್ನು ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀವು ಒಂದು ಧರ್ಮದ ಮುಖ್ಯಮಂತ್ರಿಗಳಾ ಎಂದು ಪ್ರಶ್ನಿಸಿದರು. ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದರು. ಅದು ಸರಿ. ಆದರೆ, ಮಸೂದ್, ಫಾಜಿಲ್ ಮನೆಗೆ ಯಾಕೆ ಭೇಟಿ ಕೊಡಲಿಲ್ಲ. ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಇದೇನಾ ಅದು ಎಂದು ತೀವ್ರ ವಾಗ್ದಾಳಿ ನಡೆಸಿದರು.

ನಾನು ತಿನ್ನಲ್ಲ ತಿನ್ನುವುದಕ್ಕೂ ಬಿಡಲ್ಲ ಅನ್ನೋ ಮೋದಿ ಅವರು ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಇದೆ. ಸಚಿವರು ರಾಜೀನಾಮೆ ಕೊಟ್ಟರು. ಇದರ ಬಗ್ಗೆ ಏನು ಹೇಳುತ್ತಾರೆ. ಇಂತಹ ಸರ್ಕಾರವನ್ನು ಕಿತ್ತು ಎಸೆಯಲು ನಾಡಿನ ಜನತೆ ಶಪಥ ಮಾಡಬೇಕು ಎಂದು ಕರೆ ಕೊಟ್ಟರು.

 ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಸಿದ್ದರಾಮೋತ್ಸವ ಸಮಿತಿಯ ಮುಖ್ಯಸ್ಥ ಎಚ್.ಕೆ ಪಾಟೀಲ್, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕರಾದ ಜಮೀರ್ ಅಹಮ್ಮದ್, ಅಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರುಗಳು ಹಾಗೂ 6 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!