ಒಂದು ಯುದ್ಧ ಗೆದ್ದ ಸುಮಲತಾಗೆ ಇರುವ ಸವಾಲುಗಳು..!

433

ನಟಿ ಸುಮಲತಾ ಅಂಬರೀಶ್ ಇದೀಗ ಫುಲ್ ಟೈಂ ರಾಜಕಾರಣಿ. ನೂತನ ಸಂಸದೆಯಾದ್ಮೇಲೆ ಮಂಡ್ಯದಲ್ಲಿ ನಾಳೆ ಅಂಬಿ ಹುಟ್ಟು ಹಬ್ಬ ಮತ್ತು ‘ಸ್ವಾಭಿಮಾನಿ ವಿಜಯೋತ್ಸವ’ ಆಚರಣೆ ಮಾಡ್ತಿದ್ದಾರೆ. ಬೆಂಗಳೂರಿನ ಕಠೀರವ ಸ್ಟೂಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಮಂಡ್ಯಕ್ಕೆ ತೆರಳಲಿದ್ದಾರೆ. ಅಲ್ಲಿ ಕಾಳಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಿಲ್ವರ್ ಜ್ಯೂಬಲ್ ಪಾರ್ಕ್ ನಲ್ಲಿ ‘ಸ್ವಾಭಿಮಾನಿ ವಿಜಯೋತ್ಸವ ಹಾಗೂ ಅಂಬಿಯ 67ನೇ ಹುಟ್ಟು ಹಬ್ಬ ಆಚರಿಸಲಿದ್ದಾರೆ.  

ಮೊದಲ ರಾಜಕೀಯ ಗೆಲುವಿನ ಖುಷಿಯಲ್ಲಿರುವ ಸುಮಲತಾ ಅವರ ಮುಂದೆ ಒಂದಿಷ್ಟು ಸವಾಲುಗಳಿವೆ. ಜೆಡಿಎಸ್ ಕೋಟೆಯಲ್ಲಿ ಏಕಾಂಗಿಯಾಗಿ ಹೋರಾಟ ಮುಂದುವರೆಸಬೇಕು. ಚುನಾವಣೆಪೂರ್ವದ ಹೋರಾಟ ಒಂದು ರೀತಿ. ಗೆದ್ದ ಮೇಲೆ ನಡೆಸುವ ಹೋರಾಟ ಇನ್ನೊಂದು ರೀತಿ. ಹೀಗಾಗಿ ಪಾಲಿ‘ಟ್ರಿಕ್ಸ್’ ಮಾಡಲೇಬೇಕು.

ಮಂಡ್ಯದ ಬಂಡಾಯ ಕೈ ನಾಯಕರ ಸಾಥ್, ಬಿಜೆಪಿ ಬೆಂಬಲ, ಚಿತ್ರರಂಗದ ಸಪೋರ್ಟ್, ರೈತ ಸಂಘದ ಸ್ನೇಹ ಇದರ ಜೊತೆಗೆ ಜಿಲ್ಲೆಯ ಜನರು ಕೈ ಹಿಡಿದಿದ್ದಾರೆ. ಆದ್ರೆ, ಇವರ ಮುಂದಿನ ನಡೆಗೆಯಲ್ಲಿ ತೊಡರುಗಳು ಸಾಕಷ್ಟಿವೆ. ಮಂಡ್ಯದ ಏಳೂ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇದರಲ್ಲಿ ಇಬ್ಬರು ಮಂತ್ರಿಗಳು, ರಾಜ್ಯಸಭಾ ಸದಸ್ಯರು. ಅಲ್ದೇ, ಜಿಲ್ಲಾ ಪಂಚಾಯ್ತಿಯಿಂದ ಹಿಡಿದು ಎಲ್ಲ ಕಡೆ ‘ದಳ’ಪತಿಗಳ ಕಬಂಧಬಾಹು ವ್ಯಾಪಿಸಿಕೊಂಡಿದೆ. ಇದರ ಮಧ್ಯೆ ಸ್ವಾಭಿಮಾನಿ ಮಹಿಳೆ ತಮ್ಮ ಕ್ಷೇತ್ರವನ್ನ ಅಭಿವೃದ್ಧಿ ಮಾಡಬೇಕಾಗಿದೆ.

ಬಂಡಾಯ ಕೈ ನಾಯಕರ ಸ್ನೇಹ, ಬಿಜೆಪಿ ನಾಯಕರನ್ನ ದೂರ ತಳ್ಳಲಾಗದ ಸ್ಥಿತಿ, ರೈತ ಸಂಘದ ಬೇಡಿಕೆಗಳು, ಜೊತೆಗೆ ಜೆಡಿಎಸ್ ಪಾಳೆಯದಿಂದ ಎದುರಾಗುವ ಸವಾಲುಗಳಿಗೆ ಜವಾಬ್ ಕೊಡುಬೇಕಾದ ಅನಿವಾರ್ಯತೆ ಇದೆ. ಮಂಡ್ಯ ಸೋಲು ಜೆಡಿಎಸ್ ಪಡೆಯಲ್ಲಿ ಬೆಂಕಿ ಹಚ್ಚಿದೆ. ಮೇಲ್ನೋಟಕ್ಕೆ ಇದರ ಉರಿ ಕಾಣಿಸಿಕೊಳ್ಳದಿದ್ದರೂ, ಒಳಗೊಳಗೆ ತಣ್ಣಗೆ ತನ್ನ ಕೆಲಸ ಮಾಡುತ್ತೆ. ಹೀಗಾಗಿ ಜೆಡಿಎಸ್ ನಾಯಕರೊಂದಿಗೆ ಹೇಗೆ ನಡೆದುಕೊಳ್ತಾರೆ ಅನ್ನೋದು ಮುಖ್ಯ. ನಗುಮುಖದೊಂದಿಗೆ ಕೆಲಸ ಮಾಡ್ತಾರಾ. ಇದಕ್ಕೆ ಆ ಕಡೆಯಿಂದ ಸಿಗುವ ಬೆಂಬಲ ಹೇಗಿರುತ್ತೆ.. ಪ್ರತಿಯೊಂದಕ್ಕೂ ಹೋರಾಟ ಮಾಡಿಕೊಂಡೇ ಹೋಗಬೇಕಾಗುತ್ತಾ ಅನ್ನೋ ಪ್ರಶ್ನೆಗಳಿವೆ.

ಯಾಕಂದ್ರೆ, ಈಗಾಗ್ಲೇ ಕಾವೇರಿ ನೀರಿನ ವಿಚಾರ ಪ್ರಸ್ತಾಪವಾಗಿದೆ. ಜೆಡಿಎಸ್ ನಾಯಕರು ನೂತನ ಸಂಸದೆಯ ಕಾಲೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ರೈತರ ಸಮಸ್ಯೆ, ನಿರುದ್ಯೋಗ, ಗ್ರಾಮೀಣ ಭಾಗದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಜಿಲ್ಲೆಯಿಂದ ಜನರನ್ನ ಗೂಳೆ ಹೋಗದಂತೆ ತಡೆಯಬೇಕಾದ ಕೆಲಸ ಸೇರಿದಂತೆ ಎಲೆಕ್ಷನ್ ಟೈಂನಲ್ಲಿ ನೀಡಿದ್ದ ಭರವಸೆಗಳ ಲಿಸ್ಟ್ ಇದೆ. ಇದೆಲ್ಲವನ್ನ ಮಾಡಲು ಸಂಸದೆ ಸಮಲತಾ ಅಂಬರೀಶ್ ಅವರು ಹೇಗೆ ರಾಜಕೀಯ ಲೆಕ್ಕಾಚಾರ ಹಾಕ್ತಾರೆ ಅನ್ನೋದು ಮುಖ್ಯವಾಗಿದೆ.

ನಿಖಲ್ ಕುಮಾರಸ್ವಾಮಿಗಿಂತ ರಾಜಕೀಯವಾಗಿ ಪ್ರಬುದ್ಧರು ಅನ್ನೋದು ಒಪ್ಪಿಕೊಳ್ಳಬೇಕು. ನೇರ ರಾಜಕಾರಣ ಹೊಸದು ಇರಬಹುದು. ಆದ್ರೆ, ಪತಿ ಅಂಬಿಯಿಂದ ರಾಜಕೀಯ ಪಾಠ ಒಂದಿಷ್ಟು ಕಲಿತುಕೊಂಡಿರ್ತಾರೆ. ಇದರ ಜೊತೆಗೆ ವಯಸ್ಸು, ಅನುಭವ, ಆಡುವ ಮಾತು ಎಲ್ಲವನ್ನೂ ನೋಡಿದಾಗ ನಿಖಿಲ್ ಗಿಂತ ಬೆಸ್ಟ್ ಅಂತಾ ಜನ ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆಯನ್ನ ಸಕ್ಸಸ್ ಮಾಡುವ ಜವಾಬ್ದಾರಿ ಸುಮಲತಾ ಅಂಬರೀಶ್ ಅವರ ಮೇಲಿದೆ.




Leave a Reply

Your email address will not be published. Required fields are marked *

error: Content is protected !!