ಹತ್ತನೇ ಕ್ಲಾಸ್ ದಾಟದವನ ಯಶಸ್ವಿ ಇಸ್ರೇಲ್ ಕೃಷಿ ಮತ್ತು ಪ್ರವಾಸ ಕಥನ…

581

ಇಸ್ರೇಲ್ ಕೃಷಿ ಪದ್ಧತಿ ಹಾಗೂ ಶಿರಸಿ ಮೂಲದ ರೈತ ಅದನ್ನ ಅಳವಡಿಸಿಕೊಂಡು ಯಶಸ್ವಿ ಮಾದರಿ ರೈತರಾದ ಕುರಿತು ಲೇಖಕಿ ಬೀನಾ ದೇವಳಿ ಅವರ ಬರೆದ ಲೇಖನ ಇಲ್ಲಿದೆ..

ಸಿಮೆಂಟ್ ಕಾಣದ ಜಾಗದಲ್ಲೆಲ್ಲ ದಟ್ಟ ಹಸಿರು. ಬಣ್ಣದ ಹೂಗಳು, ಮಾವು, ಬದನೆಕಾಯಿ, ದ್ರಾಕ್ಷಿ, ಖರ್ಜೂರ ತೋಟಗಳು. ಆದರೆ ಇವುಗಳನ್ನು ನೋಡಿಕೊಳ್ಳಲು ಯಾವ ಮಾಲಿಯೂ ಕಾಣುವುದಿಲ್ಲ. ಎಲ್ಲಿ ನೋಡಿದರಲ್ಲಿ ತುಂತುರು ಹನಿ ನೀರಾವರಿ. ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಅಲ್ಲಿಯ ಕೃಷಿ ಚಟುವಟಿಕೆಯಲ್ಲಿ ವೇಗವೂ ಹೆಚ್ಚು, ಲಾಭಗಳಿಕೆಯ ಪ್ರಾಮಾಣವೂ ಅಧಿಕ. ಹೀಗೆ ಚಿಕ್ಕ ಚಿಕ್ಕ ಭೂಮಿಯಲ್ಲಿ ಇಸ್ರೇಲ್ ರೈತರು ಅದೆಷ್ಟು ಅದ್ಭುತವಾಗಿ ಕೃಷಿ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿ.

ಇಲ್ಲಿ ಕೃಷಿಗೆ ಸಂಪೂರ್ಣವಾಗಿ ತಂತ್ರಜ್ಞಾನ ಬಳಸಲಾಗುತ್ತಿದೆ. ಇಲ್ಲಿ ಗಿಡ ನೆಡುವ ಸಂದರ್ಭ ಒಂದನ್ನು ಬಿಟ್ಟು ನೀರುಣಿಸುವದರಿಂದ ಕಳೆ ಕೀಳುವವರೆಗೂ ಎಲ್ಲಾ ಕೆಲಸವನ್ನು ಯಂತ್ರಗಳಿಂದಲೇ ಮಾಡಲಾಗುತ್ತದೆ ಎಂದು ಇಸ್ರೇಲ್ ದೇಶದ ಕೃಷಿ ವ್ಯವಸ್ಥೆಯನ್ನು ನೋಡಿ ಬಂದ ಡಾ.ಮರಿಗೌಡ ಪ್ರಶಸ್ತಿ ವಿಜೇತ ಕೃಷಿಕ ಶಿರಸಿ ತಾಲೂಕಿನ ಚಪ್ಪರಮನೆಯ ಶಂಕರ ಪರಮೇಶ್ವರ ಹೆಗಡೆ ನೆನಪಿಸಿಕೊಳ್ಳುತ್ತಾರೆ.

ಅಡಿಕೆ ಬೆಳೆಗಾರರಾದ ಶಂಕರ ಹೆಗಡೆ ಒಬ್ಬ ಅಂಗವಿಕಲ. ಆದರೆ ಅವರ ಉತ್ಸಾಹಕ್ಕೆ ಎಂದೂ ಅಂಗವಿಕಲತೆ ಕಾಡಲಿಲ್ಲ. ಕೇವಲ ಎಸ್ಎಸ್ಎಲ್ಸಿ ಮುಗಿಸಿದರೂ ಕೃಷಿ ಕ್ಷೇತ್ರದ ಅಧ್ಯಯನ ಇವರ ಜೀವನ ರೂಪಿಸಿತು. 2004 ರಲ್ಲಿ ಅಡಿಕೆ ಬೆಲೆ ಪಾತಾಳಕ್ಕೆ ಇಳಿದಿತ್ತ್ತು. ಆಗ ಇವರಿಗೆ ಎಲ್ಲೋ ಓದಿದ್ದ ಬೆಳೆಯೊಂದರ ಬಗ್ಗೆ ನೆನಪಾಯಿತು. ಕಡಿಮೆ ವೆಚ್ಚದಲ್ಲಿ ವ್ಯವಸಾಯ ಮಾಡಿ ಹೆಚ್ಚು ಲಾಭ ನೀಡುವ ಆರ್ಕೆಡ್ ಹೂವನ್ನು ಬೆಳೆಸಿ ಹೆಚ್ಚಿನ ಲಾಭ ಪಡೆಯುವ ಉತ್ಸಾಹ ತೋರಿಸಿದರು. ಆರ್ಕೆಡ್ ಹೂವು ಬೆಳೆದು ಲಾಭ ಪಡೆಯುವುದರ ಜೊತೆಗೆ ಚಂಡಿಗಢನಲ್ಲಿ ನಡೆದ ಹೂವಿನ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಮತ್ತು ಅಹಮದಾಬಾದ್ ನಲ್ಲಿ ಆಂಥೋರಿಯಂ, ಮೆರಿಗೋಲ್ಡ್ ಬೆಳೆಗಳಿಗೆ 2ನೇ ಸ್ಥಾನ ಪಡೆದರು.

ಇವರು ಕೃಷಿಯಲ್ಲಿ, ಅವುಗಳ ಉಪ ಬೆಳೆಗಳಲ್ಲಿ ನಡೆಸುತ್ತ ಬಂದ ಪ್ರಯೋಗಶೀಲತೆ ನೂತನ ಅವಕಾಶಗಳನ್ನೂ ತೆರೆದಿಟ್ಟಿತು. ರಾಜ್ಯ ತೋಟಗಾರಿಕಾ ಇಲಾಖೆಯು ಕೃಷಿಯಲ್ಲಿ ವಿವಿಧ ಸಾಧನೆಗಳನ್ನು ಮಾಡಿದಂತಹ ಸುಮಾರು 45 ಜನ ರೈತರನ್ನು 7 ದಿನದ ಇಸ್ರೇಲ್ ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಆಯ್ಕೆ ಮಾಡಿತು. ಇದರಲ್ಲಿ ಶಂಕರ ಹೆಗಡೆ ಕೂಡ ಒಬ್ಬರು.

ಭಾರತಕ್ಕಿಂತ 150 ಪಟ್ಟು ಪುಟ್ಟ ರಾಷ್ಟ್ರ ಇಸ್ರೇಲ್. ಕೇವಲ 3% ಜನಸಂಖ್ಯೆ ಮಾತ್ರ ಕೃಷಿಯನ್ನು ಅವಲಂಬಿಸಿದೆ. ಇಸ್ರೇಲ್ ಅರೆಮರುಭೂಮಿಯಾಗಿದ್ದು ಸುಮಾರು 40% ರಷ್ಟು ಪ್ರದೇಶದಲ್ಲಿ ಕೇವಲ 500 ಎಂಎಂ ಮಳೆಯಾಗುತ್ತದೆ. ಶೇ.90 ಪ್ರದೇಶದಲ್ಲಿ 200 ಮಿಮಿ ಗಿಂತಲೂ ಕಡಿಮೆ ಮಳೆಯಾಗುವ ಪ್ರದೇಶವಾಗಿದೆ. ನೀರು ಮತ್ತು ವಿದ್ಯುತ್ತನ್ನು ಖರೀದಿಸಿ, ಸರಕಾರದಿಂದ ಜಮೀನನ್ನು ಬಾಡಿಗೆಗೆ ಪಡೆದು ವ್ಯವಸಾಯ ಮಾಡಬೇಕಾಗುತ್ತದೆ. ಈ ಪುಟ್ಟ ದೇಶ ಅಮೆರಿಕ, ಯುರೋಪ್ ಖಂಡದ ದೊಡ್ಡ-ದೊಡ್ಡ ದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವ ಸಾಮಥ್ರ್ಯವನ್ನ ಹೊಂದಿದೆ ಅಂದ್ರೆ, ಅದೆಷ್ಟು ಕೃಷಿ ಸಾಧನೆ ಮಾಡಿದ್ದಾರೆ ನೋಡಿ.

ಇಲ್ಲಿ ಶೂನ್ಯ ತಾಪಮಾನದಿಂದ 50 ಡಿಗ್ರಿವರೆಗೆ ತಾಪಮಾನವಿರುತ್ತದೆ. ಜೂನ್ನಿಂದ ಸೆಪ್ಟಂಬರ್ವರೆಗೆ ಬೇಸಿಗೆ, ಅಕ್ಟೋಬರ್ನಿಂದ ಜನವರಿವರೆಗೆ ಮಳೆಗಾಲ, ಫೆಬ್ರವರಿಯಿಂದ ಮೇವರೆಗೂ ಚಳಿಗಾಲ. ಈ ಪುಟ್ಟ ದೇಶದಲ್ಲಿ ನೀರಿಗೆ ಅತ್ಯಮೂಲ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಶಂಕರ ಹೆಗಡೆ ತಿಳಿಸುತ್ತಾರೆ. ಸುಮಾರು ಶೇ.87-90% ನೀರನ್ನು ಶುದ್ದೀಕರಿಸಿ ಪುನರ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶೇ.40% ರಷ್ಟು ನೀರನ್ನು ಮೆಡಿಟರೇನಿಯನ್ ಸಮುದ್ರದಿಂದಲೂ, ಶೇ.25% ನೀರನ್ನು ಗೆಲಿಲಿಯೋ ನದಿಯಿಂದಲೂ ಹಾಗು ಶೇ.35% ನೀರನ್ನು ಬೋರ್ವೆಲ್ನಿಂದಲೂ ಬಳಸಲಾಗುತ್ತದೆ.

ಇಸ್ರೇಲ್ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದೆ. ಮುಖ್ಯವಾಗಿ ಗೋಧಿ, ಸೂರ್ಯಕಾಂತಿ, ಶೇಂಗಾ, ಓಲಿವ್, ದ್ರಾಕ್ಷಿ, ಮಾವು, ದಾಳಿಂಬೆ, ಬಾಳೆ, ನಿಂಬೆ, ಕಲ್ಲಂಗಡಿ, ಟೊಮ್ಯಾಟೊ, ಗುಲಾಬಿ, ಗಜರಿ, ಬದನೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಕೀಬುಟ್ಸ್ ಮತ್ತು ಮುಷಾಬ್ ಎನ್ನುವ ಎರಡು ಗುಂಪುಗಳಿದ್ದು ಕೃಷಿಯಲ್ಲಿ ಅಮೂಲಾಗ್ರ ಬೆಳವಣಿಗೆಯನ್ನು ಮಾಡಿವೆ. ದೇಶದಲ್ಲಿ ಸುಮಾರು 270 ಕಿಬೂಟ್ಸಗಳಿವೆ. ಸಮಾನ ಮನಸ್ಕರೆಲ್ಲರೂ ಸೇರಿ, ರಚಿಸಿಕೊಂಡ ಗಂಡು ಸಮೂಹಕ್ಕೆ ಕಿಬೂಟ್ಸ್ ಎಂದು ಹೇಳಲಾಗುತ್ತದೆ. ಮುಷಾಬ್ ಕೂಡ ಒಂದು ಗುಂಪಾಗಿದ್ದು, ಇದರಲ್ಲಿ ವೈಯಕ್ತಿಕ ಜಮೀನನ್ನು ಸರ್ಕಾರದಿಂದ ಗೇಣಿ ಪಡೆದು ವ್ಯವಸಾಯ ಮಾಡುತ್ತಾರೆ. ಇವರು ಶಿಕ್ಷಣ, ವೈದ್ಯಕೀಯ ಹೀಗೆ ಹಲವಾರು ಅಗತ್ಯ ರೀತಿಯ ಸೌಲಭ್ಯಗಳನ್ನು ಪಡೆದಿದ್ದಾರೆ. ಬಂದಂತಹ ಲಾಭದಲ್ಲಿ ಶೇ.40 ರಷ್ಷನ್ನು ಜನರಿಗೆ ಹಾಗು ಉಳಿದ ಶೇ.60 ರಷ್ಟನ್ನು ಮುಂದಿನ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸುತ್ತಾರೆ. ಚಳಿಗಾಲದಲ್ಲಿ ಪಾಲಿಹೌಸ್ ನಲ್ಲಿ ಬೆಸಿಲಿಯಂ ಬೆಳೆ ಬೆಳೆಯುತ್ತಿದ್ದು ಭೂಮಿಯಲ್ಲಿ ಸಿಗುವ ಬಿಸಿನೀರನ್ನು ಉಪಯೋಗಿಸಿಕೊಂಡು ಬೆಳೆಸಿ ಯೂರೋಪಿನ ದೇಶಗಳಿಗೆ ರಫ್ತು ಮಾಡುತ್ತಾರೆ

ಇಸ್ರೇಲ್ ಕೃಷಿ ಪ್ರವಾಸ ಕೈಗೊಳ್ಳುವುದಾದರೆ ಈ ಸ್ಥಳನ್ನ ನೋಡಿ:

ಗಿನೇಸಾರ್ ನಲ್ಲಿ ಅಂಗಾಂಶ ಕೃಷಿಯಾಗಿ ಬೆಳೆದ ಬಾಳೆ ತೋಟ, ಮಾವಿನ ತೋಟ

ಅಫಿಕೀಮ್ ಎಂಬಲ್ಲಿ ಗಣಿಕೀಕೃತವಾದ ಹಾಲಿನ ಡೈರಿ

ಸ್ಟೈಲಿಯಾದಲ್ಲಿ ಡೈರಿ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಖರ್ಜೂರದ ಜೊತೆಗೆ ಸಾವಯವ ಕೃಷಿ

ಹೈದಾದಲ್ಲಿ ಬಹಾಯೈ ಗಾರ್ಡನ್ ಪ್ರವಾಸಿಗರನ್ನ ಆಕರ್ಷಿಸುತ್ತದೆ

ಇಸ್ರೇಲ್ ರಾಜಧಾನಿಯಾದ ಜರುಸಲೆಂನಲ್ಲಿ ಸಂಸತ್, ಸುಪ್ರೀಂ ಕೋರ್ಟ್, ಗುಲಾಬಿ ತೋಟ

ಬಿಶೀವಿಯಾ ನಗರದಲ್ಲಿ ರಫ್ತಾಗುವ ಗುಲಾಬಿ ಹೂವುಗಳ ಸಂರಕ್ಷಣೆಗಾಗಿ ಮಾಡಲಾದ ಕೂಲಿಂಗ್ ಚೆಂಬರ್ ಮತ್ತು ಪ್ಯಾಕಿಂಗ್ ಯೂನಿಟ್.

ಗಿನೇಸಾರ್ ಎಂಬ ಪ್ರಾಂತ್ಯದಲ್ಲಿ ಸುಮಾರು 76 ವರ್ಷ ಹಿಂದಿನಿಂದಲೂ ಕೃಷಿ ಚಟುವಟಿಕೆಯನ್ನು ಬೆಳೆಸಿಕೊಂಡು ಬಂದಿದ್ದು ಇಲ್ಲಿ ಹಣಕೊಟ್ಟೇ ಖರೀದಿಸಿ ವ್ಯವಸಾಯ ಮಾಡಿ ಒಳ್ಳೆಯ ಲಾಭ ಗಳಿಸುತ್ತಿರಬೇಕಾದರೆ ಸಂಪದ್ಭರಿತ ರಾಷ್ಟ್ರವಾದ ಭಾರತ, ಇಸ್ರೇಲ್ ವ್ಯವಸಾಯ ಪದ್ದತಿಯನ್ನು ಅಳವಡಿಸಿಕೊಂಡು ಯಾವ ಮಟ್ಟಿಗೆ ಅಭಿವೃಧಿಯನ್ನು ಹೊಂದಬಲ್ಲದು ಎಂಬುದನ್ನು ಊಹಿಸಿಕೊಳ್ಳುವುದೂ ಅಸಾಧ್ಯ ಅಂತಾರೆ ಶಂಕರ ಪರಮೇಶ್ವರ ಹೆಗಡೆ ಅವರು.

ಲೇಖಕಿ ಬೀನಾ ದೇವಳಿ





Leave a Reply

Your email address will not be published. Required fields are marked *

error: Content is protected !!