ರಾಷ್ಟ್ರಪಿತ-ರಾಷ್ಟ್ರಪುತ್ರ ಇತ್ಯಾದಿ

668

ಮಹಾತ್ಮ ಗಾಂಧಿ ರಾಷ್ಟ್ರ ಪುತ್ರ. ವೇದ ವ್ಯಾಸರು ರಾಷ್ಟ್ರಪಿತ ಅನ್ನೋ ಮಾತುಗಳನ್ನ ಪೇಜಾವರ ಶ್ರೀಗಳು ಆಡಿದ್ದಾರೆ. ಇದರ ಉದ್ದೇಶವೇನು? ಇದು ಎಷ್ಟು ಸರಿ ಅನ್ನೋದರ ಲೇಖನವನ್ನ ಪ್ರಗತಿಪರ ಚಿಂತಕ ಈ.ಬಸವರಾಜು ಅವರು ಬರೆದಿದ್ದಾರೆ…

ಕೆಲವು ಬಿರುದುಗಳು ಹೇಗೆ ಹುಟ್ಟಿಕೊಳ್ಳುತ್ತವೋ ತಿಳಿಯದು. ಹೋರಾಟಗಾರ, ಶಿಕ್ಷಣ ತಜ್ಞ, ಚಿಂತಕ, ಚಳಿವಳಿಗಾರ, ಮಣ್ಣಿನ ಮಗ ಹೀಗೆ ಕೆಲವು ಬಿರುದುಗಳು ಜನ ಸಮೂಹದಲ್ಲಿ ಹುಟ್ಟಿಕೊಂಡು ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ಅಧಿಕೃತ ಬಿರುದು ಬಾವಲಿಗಳಿಗಿಂತ ಇವು ಹೆಚ್ಚು ಗಟ್ಟಿಯಾಗುತ್ತವೆ. ಕಾರಣ ಅವು ಜನರ ನಡುವಿನಿಂದ ಹುಟ್ಟಿಕೊಂಡಿರುತ್ತವೆ. ಹೀಗೆ ಹುಟ್ಟಿಕೊಳ್ಳಲು ಹೆಚ್ಚಿನ ಸಂದರ್ಭದಲ್ಲಿ ಆ ವ್ಯಕ್ತಿ ಮಾಡುವ ಕೆಲಸಗಳು ಕಾರಣವಾಗುತ್ತವೆ. ಅದರ ಜೊತೆಗೆ ಮಾಧ್ಯಮಗಳು ಅದಕ್ಕೆ ನೀರು ಗೊಬ್ಬರ ಎರೆದು ಬೆಳೆಸುತ್ತವೆ.

ಇದಕ್ಕಿದ್ದಂತೆ ಇಂಥ ಬಿರುದುಗಳು ಪ್ರಶ್ನೆಗೊಳಗಾಗಿ ವಿವಾದಕ್ಕೂ ಈಡಾಗುತ್ತವೆ.
ಭಾರತ ಸ್ವಾತಂತ್ರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸರಳತೆಯನ್ನೇ ಮೈಗೂಡಿಸಿಕೊಂಡು ಅನೇಕ ವರ್ಷಗಳ ಜೈಲು ವಾಸ ಅನುಭವಿಸಿ ಗ್ರಾಮೀಣ ಭಾರತದ ಅಭಿವೃದ್ಧಿಗೆ ತಮ್ಮದೇ ಪ್ರಾಯೋಗಿಕ ಸಲಹೆಗಳನ್ನು ನೀಡಿ, ಒಂದು ಉತ್ತಮ ಸಮಾಜ ಹೇಗಿರಬೇಕೆಂದು ತೋರಿಸಿಕೊಟ್ಟವರು ಮೊ.ಕ. ಗಾಂಧಿ. ದೇಶ ಸ್ವಾತಂತ್ರ ಪಡೆದು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಗಾಂಧಿ ಕಲ್ಕತ್ತದಲ್ಲಿ ನಡೆಯುತ್ತಿದ್ದ ಹಿಂದು ಮುಸ್ಲಿಂ ಗಲಭೆಯನ್ನು ನಿಯಂತ್ರಿಸಲು ಉಪವಾಸ ಕೂರುತ್ತಾರೆ. ಭಾರತದಾಚೆಗೂ ಗಾಂಧಿ ವ್ಯಕ್ತಿತ್ವ ಅನೇಕ ನಾಯಕರನ್ನು, ಜನ ಮಾನಸವನ್ನು ಆಕಷರ್ಿಸಿದೆ. ಇಂಥ ಗಾಂಧಿಯನ್ನು ರಾಷ್ಟ್ರಪಿತ ಎಂದು ಇಡೀ ರಾಷ್ಟ್ರವೇ ಒಪ್ಪಿ ಅದನ್ನು ಮುಂದುವರೆಸಿಕೊಂಡು ಬಂದಿರುವುದು ಈಗ ಇತಿಹಾಸ.

ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ


ಪ್ರಸ್ತುತ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತಮ್ಮದೇ ಸಂಶೋಧನೆಯ ಮೂಲಕ ಒಳನೋಟವನ್ನು ಪಡೆದು ವೇದ ವ್ಯಾಸರಿಗೆ ರಾಷ್ಟ್ರಪಿತ ಸ್ಥಾನವನ್ನು ನೀಡಿ ಗಾಂಧಿಯವರಿಗೆ ರಾಷ್ಟ್ರಪುತ್ರ ಸ್ಥಾನವನ್ನು ನೀಡಬಹುದೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಪುರಾಣವನ್ನು ಇತಿಹಾಸವನ್ನಾಗಿಸುವ ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ವೇದ ವ್ಯಾಸರು ಯಾವಾಗ ಹುಟ್ಟಿದರು, ಕಾಲಮಾನವೇನು?, ಅವರ ಕೆಲಸ ಕಾರ್ಯಗಳೇನು ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳ ಕೊರತೆಯಂತೂ ಇದೆ. ವೇದ ವ್ಯಾಸರ ಬಗ್ಗೆ ಲಭ್ಯ ಇರುವ ಮಾಹಿತಿ ನೋಡಿದಾಗ ಒಮ್ಮೊಮ್ಮೆ ಅದು ಪುರಾಣದಂತೆ ಗೋಚರವಾಗುತ್ತದೆ. ಹಾಗೆ ನೋಡಿದರೆ ಭಾರತ ಒಂದು ರಾಷ್ಟ್ರ ಎಂಬ ಕಲ್ಪನೆಯನ್ನು ಪಡೆದದ್ದು ಸ್ವಾತಂತ್ರ್ಯಾ ನಂತರದಲ್ಲಿ. ಅದಕ್ಕೂ ಮೊದಲು ಅದು ಅನೇಕ ಸಾಮ್ರಾಜ್ಯಗಳಾಗಿತ್ತು. ವೇದ ವ್ಯಾಸರ ಕಾಲ ಎಂದು ಹೇಳುವ ಅವಧಿಯಲ್ಲಂತೂ ರಾಷ್ಟ್ರ ಎಂಬ ಪದವೇ ಇರಲಿಲ್ಲ ಎಂದು ಹೇಳಬಹುದಾಗಿದೆ. ಸತ್ಯವತಿ-ಪರಾಶರ ಅವರ ಮಗನಾದ ವೇದ ವ್ಯಾಸ ಮಹಾಭಾರತ ರಚಿಸಿದನೆಂಬ ಮಾಹಿತಿ ಇದೆ. ಇದನ್ನು ನೋಡುವಾಗ ಯಾವುದು ಪುರಾಣ, ಯಾವುದು ವಾಸ್ತವ ಎಂಬ ಗೊಂದಲಗಳು ಉಂಟಾಗುವುದು ಸಹಜ. ಮಹಾತ್ಮ ಗಾಂಧಿಯವರು ಬಹಳ ಇತ್ತೀಚೆಗೆ ಭಾರತದಲ್ಲಿ ಹಾಗೂ ದಕ್ಷಿಣ ಆಫ್ರೀಕಾದಲ್ಲಿ ತಮ್ಮ ಜನಮುಖಿ ಹಾಗೂ ಜೀವನ್ಮುಖಿ ಹೋರಾಟಗಳ ಮೂಲಕ ಜನರ ನಾಯಕನಾಗಿ ಹೊರ ಹೊಮ್ಮಿದ್ದಾರೆ.

ಗಾಂಧಿ ಎನ್ನುವಾಗ ಮೊದಲು ನಮ್ಮೆಲ್ಲರ ನಾಲಿಗೆಯಿಂದ ಉಚ್ಚಾರವಾಗುವ ಪದ ಮಹಾತ್ಮ. ಇಂಥ ಗಾಂಧಿಯನ್ನು ರಾಷ್ಟ್ರ ಪುತ್ರನನ್ನಾಗಿ ಮಾಡಿ, ವೇದ ವ್ಯಾಸರನ್ನು ರಾಷ್ಟ್ರಪಿತನನ್ನಾಗಿ ಮಾಡಲು ಸಲಹೆ ಮಾಡಿರುವ ಪೇಜಾವರರ ಮಾತುಗಳು ಅರ್ಥವಿಲ್ಲದ ಹಿಂದೆ-ಮುಂದಿಲ್ಲದ ಚಿಂತನೆಯಾಗಿದೆ. ನಮ್ಮಲ್ಲಿ ಚಿಂತನೆ ಮಾಡಬೇಕಾದ ಅನೇಕ ವಿಷಯಗಳಿವೆ. ಜನರ ಜೀವನಕ್ಕೆ, ಇಡೀ ಸಮಷ್ಠಿಗೆ ಬೇಕಾದ ಅನೇಕ ಚಿಂತನೆಗಳು ಇಂದಿನ ಅಗತ್ಯವಾಗಿದೆ. ಹಾಗಿರುವಾಗ ಪೇಜಾವರರ ಈ ಗೊಡ್ಡು ಸಂಪ್ರದಾಯದ ಹೇಳಿಕೆ ಅನಪೇಕ್ಷಣೀಯವಾಗಿದೆ ಮತ್ತು ಗಾಂಧಿಯವರ ವ್ಯಕ್ತಿತ್ವಕ್ಕೆ ಅಗೌರವವನ್ನು ತರುವುದಾಗಿದೆ.


TAG


Leave a Reply

Your email address will not be published. Required fields are marked *

error: Content is protected !!