ನಿಮಗೆ ಕಾಣಿಸದ ಪರದೆ ಹಿಂದಿನ ಪಾತ್ರಗಳು…

597

ಮಾಧ್ಯಮದ ಆಚೆ ನಿಂತವರಿಗೆ ಇದು ಸುಂದರವಾಗಿ ಕಾಣುವ ವೃತ್ತಿ. ಇದರೊಳಗೆ ಬದುಕು ಕಟ್ಟಿಕೊಂಡವರಿಗೆ ಗೊತ್ತು ಅದರ ಹಾಡು ಪಾಡು. ಇಲ್ಲಿ ಫ್ಯಾಶನ್ ಅಂತಾ ಬಂದವರು ಇದಾರೆ. ಏನಾದ್ರೂ ಸಾಧಿಸಬೇಕು ಅನ್ನೋ ಕನಸು ಕಾಣ್ತಿರುವವರು ಇದಾರೆ. ಜೀವನದಲ್ಲಿ ಏನಾದ್ರೂ ಒಂದು ಕೆಲಸ ಮಾಡಬೇಕಲ್ಲ ಅಂತಾ ಕೆಲಸ ಮಾಡ್ತಿರುವವರು ಇದಾರೆ. ಯಾರು ಹೇಗೆ ಬರ್ಲಿ, ಎಲ್ಲರದೂ ಹೊತ್ತು ಗೊತ್ತು ಇಲ್ಲದ ದುಡಿಮೆ.

ನಿಮ್ಮ ಮನೆಗೆ ಪೇಪರ್ ತಲುಪಿಸುವ ಹುಡ್ಗನಿಂದ ಹಿಡಿದು ಪತ್ರಿಕೆ, ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರ ತನಕ ಟೆನ್ಷನ್ ನಲ್ಲಿಯೇ ಕೆಲಸ ಮಾಡುವುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸರಿಯಾದ ಟೈಂಗೆ ಆಫೀಸ್ ಗೆ ಬರುವುದಷ್ಟೇ ಮುಖ್ಯ. ಅಲ್ಲಿಂದ ರೂಮು, ಮನೆ ತಲುಪುವುದು ಆ ದಿನದ ಕೆಲಸ ನಿರ್ಧಾರ ಮಾಡುತ್ತೆ. 8 ಗಂಟೆ ಡ್ಯೂಟಿ ಅನ್ನೋದು ನಮ್ಮ ಹಣೆ ಬರಹದಲ್ಲಿ ಬರ್ದಿಲ್ಲ. ರೌಂಡ್ ದಿ ಕ್ಲಾಕ್ ಕೆಲಸ ನಡೆಯುತ್ತಲೇ ಇರುತ್ತೆ.

ಶಿಫ್ಟ್ ಪ್ರಕಾರ ಕೆಲಸ ಇದ್ರೂ ಯಾರಿಗೂ ಹೇಳದೆ ಕೇಳದೆ ಲಾಗೌಟ್ ಆಗುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಯಾಕಂದ್ರೆ, ಅವರನ್ನ ನಂಬಿ ಸಂಸ್ಥೆ ಜವಾಬ್ದಾರಿ ಕೊಟ್ಟಿರುತ್ತೆ. ಅದು ಕಂಪ್ಲೀಟ್ ಆಗುವ ತನಕ ಟೈಂ ಬಗ್ಗೆ ತೆಲೆ ಕೆಡಿಸಿಕೊಳ್ಳದೆ ಕೆಲಸ ಮಾಡಬೇಕು. ಹೀಗಾಗಿ ಸರಿಯಾದ ಟೈಂಗೆ ಟಿಫಿನ್, ಊಟ, ನಿದ್ದೆ ಅನ್ನೋದು ಇಲ್ಲ. ನೈಟ್ ಶಿಫ್ಟ್ ಮಾಡಿದವರಲ್ಲಿ ಯಾರಿಗಾದ್ರೂ ಕಂಟಿನ್ಯೂ ಹಾಕಿದ್ರೆ, ರಾತ್ರಿ 11ಗಂಟೆಯಿಂದ ಮರುದಿನ ಮಧ್ಯಾಹ್ನ 2 ಗಂಟೆಯ ತನಕ ಕೆಲಸ ಮಾಡಬೇಕು ಅಂದ್ರೆ ನಂಬತೀರಾ.. ಹೀಗೆ ಕೆಲಸ ಮಾಡಿದವರಿಗೆ ಒಮ್ಮೊಮ್ಮೆ ಕ್ಯಾಬ್ ಸಿಗೋದಿಲ್ಲ. ಸ್ವಂತ ಗಾಡಿಯಿಲ್ಲಂದ್ರೆ ಬಸ್ ಹಿಡ್ಕೊಂಡು ಮನೆ ಸೇರುವಷ್ಟರಲ್ಲಿ ಸಂಜೆ 5 ಗಂಟೆಯಾಗುತ್ತೆ.

ಮುಂಜಾನೆ 8ರಿಂದ ಸಂಜೆ 5 ಗಂಟೆವರೆಗೂ ಒಂದು ಶಿಫ್ಟ್, ಮಧ್ಯಾಹ್ನ 2ರಿಂದ ರಾತ್ರಿ 11.30 ಮತ್ತೊಂದು ಶಿಫ್ಟ್, ರಾತ್ರಿ 11.30ರಿಂದ ಬೆಳಗ್ಗೆ 8ಗಂಟೆ ತನಕ ಮಗದೊಂದು ಶಿಫ್ಟ್. ಪತ್ರಿಕೆಯಲ್ಲಿರುವವರಿಗೆ ಮಧ್ಯಾಹ್ನದಿಂದ ರಾತ್ರಿ 2 ಗಂಟೆ ತನಕ ಕೆಲಸ ಮಾಡುವುದು ನೈಟ್ ಶಿಫ್ಟ್. ಹೀಗೆ ಸರಿಯಾದ ಟೈಂಗೆ ಲಾಗಿನ್ ಆಗಬೇಕು ಅಂದ್ರೆ ಮನೆ ಎಷ್ಟೊತ್ತಿಗೆ ಬಿಡಬೇಕು ಅನ್ನೋದು ನೀವೆ ಲೆಕ್ಕಹಾಕಿ. ಡು ಯೂ ನೋ ಜಿಲ್ಲಾ ವರದಿಗಾರರು ದಿನದ 24 ಗಂಟೆಯೂ ಡ್ಯೂಟಿ ಮೇಲೆ ಇದ್ದಂತೆ. ಯಾಕಂದ್ರೆ, ಸುದ್ದಿಗಾಗಿ ಮಧ್ಯರಾತ್ರಿ 2, 3 ಗಂಟೆಗೆ ಫೋನ್ ಮಾಡಿ ಕೇಳಲಾಗುತ್ತೆ. ಅದಕ್ಕೆ ಅವರು ಉತ್ತರಿಸಬೇಕು. ಲೇಟ್ ನೈಟ್ ಬ್ರೇಕಿಂಗ್ ನ್ಯೂಸ್ ಇದ್ರೆ ಕೊಡಬೇಕು. ಇಲ್ದೇ ಹೋದ್ರೆ, ಬೆಳಗ್ಗೆ ಅವರ ಕೆಲಸದ ಮೇಲೆ ತೂಗುಗತ್ತಿ ನೇತಾಡ್ತಾ ಇರುತ್ತೆ.

ಬೆಂಗಳೂರು ಹಾಗೂ ಜಿಲ್ಲೆಗಳಲ್ಲಿರುವ ರಿಪೋರ್ಟರ್ ಗಳು ಸದಾ ಹೈಲರ್ಟ್ ಆಗಿರಬೇಕು. ಯಾವಾಗ ಫೋನೋ ಕೊಡು ಅಂತಾರೋ.. ಯಾವಾಗ ಲೈವ್ ಗೆ ನಿಂತುಕೊಳ್ಳಿ ಅಂತಾರೋ ಗೊತ್ತಿಲ್ಲ. ಎಲ್ಲದಕ್ಕೂ ಸಿದ್ಧವಾಗಿರಬೇಕು. 20, 25 ಕೆಜಿ ಬ್ಯಾಕ್ ಪ್ಯಾಕ್ ಹೆಗಲಿಗೇರಿಸಿಕೊಂಡು ಸುದ್ದಿ ಕೊಡಬೇಕು. ಲೈವ್ ಕೊಡುವಾಗ ಕ್ಯಾಮೆರಾಮನ್ ಇದರ ಭಾರ ಹೊರಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಸುದ್ದಿಗಾಗಿ ಹತ್ತಾರು ಕಿಲೋ ಮೀಟರ್ ಓಡಬೇಕು. ಊರಲ್ಲಿ ಕೆಲಸ ಮಾಡ್ತಿದ್ರೂ ಮನೆಯವರಿಗೆ ಸರಿಯಾಗಿ ಮುಖ ತೋರಿಸುವುದಕ್ಕೂ ಆಗಲ್ಲ. ಸ್ನೇಹಿತರೊಂದಿಗೆ ಹರಟೆ ಹೊಡೆಯಲು ಆಗಲ್ಲ. ಸಂಬಂಧಿಕರ ಶುಭ ಕಾರ್ಯಗಳಿಗೂ ಹಾಜರಿ ಹಾಕಲು ಆಗೋದಿಲ್ಲ.

ಇದು ಒಂದು ದಿನದ ಗೋಳಲ್ಲ. ಹೀಗಾಗಿ ದಿನಾ ಸಾಯೋರಿಗೆ ಅಳೋದ್ಯಾರು ಅನ್ನೋ ಗಾದೆ ಮಾತು ನಮ್ಗೆ ಅನ್ವಯಿಸುತ್ತೆ. ಹಬ್ಬ ಹರಿದಿನಗಳು ಬಂದ್ರೆ ಏನು ವಿಶೇಷ ಸ್ಟೋರಿ ಕೊಡಬೇಕು ಅನ್ನೋ ಟೆನ್ಷನ್. ಮುಂಚಿತವಾಗಿ ಪ್ಲಾನ್ ಮಾಡಿದ್ರೆ ಸ್ವಲ್ಪ ನಿರಾಳ. ಆದ್ರೆ, ಮನದ ಮೂಲೆಯಲ್ಲಿ ನಮ್ಮದೆ ಧ್ವನಿ ಪಿಸುಗುಟ್ಟುತ್ತೆ, ನಾನು ಮನೆಯಲ್ಲಿ ಇದ್ದಿದ್ರೆ ಕುಟುಂಬಸ್ಥರ ಜೊತೆ ಖುಷಿಯಾಗಿ ಇರಬಹುದಿತ್ತಿಲ್ಲ ಅಂತ. ಸಣ್ಣ ಸಣ್ಣ ಖುಷಿಗಳು ಸಹ ಅನುಭವಿಸಲು ಆಗದಷ್ಟು ಎತ್ತರದಲ್ಲಿ ಕುಳಿತು ನಮ್ಮನ್ನ ಅಣುಕಿಸುತ್ತವೆ. ರಾಜಕಾರಣಿಗಳು, ಸ್ಟಾರ್ ಸಿನಿಮಾ ನಟರ ಸಾವು ನೋವು ಸಂಭವಿಸಿದಾಗ.. ಬಾಂಬ್ ಸ್ಫೋಟದಂತಹ ಘಟನೆಗಳು ನಡೆದಾಗ, ಚುನಾವಣೆ ಇದ್ದಾಗ ಪತ್ರಕರ್ತರ ಸ್ಥಿತಿ ದೇವರಿಗೆ ಪ್ರೀತಿ. ಆಗ ಕಿರು ನಗೆ ಒಂದೇ ನಮ್ಮ ಉತ್ತರವಾಗಿರುತ್ತೆ.

ಕ್ಯಾಬ್ ಡ್ರೈವರ್, ಟೆಕ್ನಿಕಲ್ ವಿಭಾಗ, ಕ್ಯಾಮೆರಾಮನ್ಸ್, ಇನ್ ಜಸ್ಟ್, ಕಾಪಿ ಎಡಿಟರ್ ಗಳು, ಉಪ ಸಂಪಾದಕರು, ಇನ್ ಪುಟ್, ಔಟ್ ಪುಟ್ ಚೀಫ್, ಆ್ಯಂಕರ್ಸ್, ವರದಿಗಾರರು, ಸ್ಪೆಷಲ್ ಟೀಂ, ಪುಟ ವಿನ್ಯಾಸಗಾರರು, ಐಟಿ ಸೆಲ್, ಎಡಿಟಿಂಗ್ ಟೀಂ, ಪಿಸಿಆರ್, ಎಂಸಿಆರ್, ಗ್ರಾಫಿಕ್ಸ್, ಲೈಬರಿ, ಮೇಕಪ್ ವಿಭಾಗ ಸೇರಿದಂತೆ ಹತ್ತಾರು ಟೀಂಗಳು ಮತ್ತು ಅವುಗಳ ಮೇಲ್ವಿಚಾರಕರು ಟಿವಿ, ಪತ್ರಿಕೆ, ವೆಬ್ ಮೀಡಿಯಾಗಳಲ್ಲಿ ಇರ್ತಾರೆ. ಒಂದು ಸಂಸ್ಥೆಯಲ್ಲಿ ಏನಿಲ್ಲಂದ್ರೂ 250 ರಿಂದ 300 ಜನ ಕೆಲಸ ಮಾಡ್ತಿರ್ತಾರೆ. ಇವರದೆಲ್ಲ ಹೇಗೆ ಅಂದ್ರೆ, ಹೊತ್ತು ಗೊತ್ತು ಇಲ್ಲದೆ ದುಡಿಮೆ.

ಇಷ್ಟೆಲ್ಲ ಒತ್ತಡ, ಟೆನ್ಷನ್, ಹೆಲ್ತ್ ಪ್ರಾಬ್ಲಮ್, ಪರ್ಷನಲ್ ಕಾರಣಗಳು ಏನೇ ಇದ್ರೂ ನಾವು ಕೆಲಸ ಮಾಡೋದು ಯಾಕೆ ಗೊತ್ತಾ.. ಆತ್ಮತೃಪ್ತಿಗಾಗಿ. ಈ ವೃತ್ತಿಯಲ್ಲಿ ಸಿಗುವ ಖುಷಿ ಬೇರೆಯದರಲ್ಲಿ ಸಿಗೋದಿಲ್ಲ. ಪ್ರತಿದಿನ ಪ್ರತಿಕ್ಷಣ ಹೊಸದನ್ನ ಕಲಿಯುತ್ತೇವೆ. ಯಾರದೋ ನೋವಿಗೆ ಸಾಂತ್ವಾನ ಹೇಳ್ತೀವಿ. ಜಗತ್ತಿನ ಸಮಸ್ಯೆ ನಮ್ಮದು ಅಂದ್ಕೊಂಡು ಟೈಂಗೆ ಸರಿಸಮಾನವಾಗಿ ಓಡುತ್ತೇವೆ. ನಾವು ಮಾಡಿದ ಸುದ್ದಿಗೆ, ಬರೆದ ಲೇಖನಕ್ಕೆ ಯಾರೋ ಹೊಗಳಿದ್ರೆ ಅದರಲ್ಲಿ ಸಿಗುವ ಖುಷಿ ಅನುಭವಿಸಿದವನಿಗೆ ಮಾತ್ರ ಗೊತ್ತು. ಸಂಬಳದ ದುಡಿಮೆಯ ಆಚೆಗೂಬ್ಬ ಸಮಾಜಸೇವಕನಿದ್ದಾನೆ. ಅವನಿಗೆ ಹೊತ್ತು ಗೊತ್ತು ಬೇಡ. ನಿಮಗಾಗಿ, ಅವನಿಗಾಗಿ 24X7 ಕೆಲಸ ಮಾಡ್ತಾನೆ…




Leave a Reply

Your email address will not be published. Required fields are marked *

error: Content is protected !!