ಹಿರಿಯ ಸಂಶೋಧಕ ಡಾ.ಎಂ.ಎಂ ಪಡಶಟ್ಟಿಗೆ ಜಿ.ಪಿ ರಾಜರತ್ನಂ ಪ್ರಶಸ್ತಿ

466

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ವಿವಿಧ ವಾರ್ಷಿಕ ಪ್ರಶಸ್ತಿ ಸಮಾರಂಭ, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ನಡೆಯಿತು. 2019ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ 12 ಸಾಧಕರಿಗೆ ಪ್ರಶಸ್ತಿ ನೀಡಲಾಯ್ತು.

ಜೆ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಿರಿಯ ಸಂಶೋಧಕ ಡಾ.ಎಂ.ಎಂ ಪಡಶೆಟ್ಟಿ ಅವರಿಗೆ ನೀಡಲಾಯ್ತು. ಪಡಶೆಟ್ಟಿ ಅವರೊಂದಿಗೆ ಕೆ.ರಾಜಕುಮಾರ ಅವರು ಸಹ ಈ ಪ್ರಶಸ್ತಿಯನ್ನ ಹಂಚಿಕೊಂಡರು.

ಪ್ರಾಧ್ಯಾಪಕ ವೃತ್ತಿಯ ಜೊತೆಗೆ ಬರವಣಿಗೆ ಹಾಗೂ ಪ್ರಕಾಶನ ಕ್ಷೇತ್ರದಲ್ಲಿಯೂ ಡಾ.ಎಂ.ಎಂ ಪಡಶೆಟ್ಟಿ ಅವರು ತೊಡಗಿಸಿಕೊಂಡವರು. ಕೊಂಡಗೂಳಿ ಕೇಶಿರಾಜ, ದಾಂಗುಡಿ, ಅಡಕಲು, ಹೇಳಕಿ ಮಾಡ್ಯಾರ ಒಡೆಯರು, ಸಿಂದಗಿ ನೀಲಗಂಗಾ, ಕುರುಬ ಹೇಳಿಕೆಗಳು, ಸಾಹಿತ್ಯ ಸಂಗತಿ, ಘನಮಠ ಶಿವಯೋಗಿಗಳು ಸೇರಿದಂತೆ ಹತ್ತಾರು ಕೃತಿಗಳನ್ನ ರಚಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ.

ಇನ್ನು ಇವರ ಸಂಪಾದಕತ್ವದಲ್ಲಿ 10ಕ್ಕೂ ಹೆಚ್ಚು ಕೃತಿಗಳು ಮೂಡಿ ಬಂದಿವೆ. ನೆಲೆ ಪ್ರಕಾಶನದ ಸಂಸ್ಥಾಪಕ ಸದಸ್ಯರಲ್ಲಿ ಇವರು ಸಹ ಒಬ್ಬರು. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ತಿಂತಿಣಿ ಮೋನಪಯ್ಯ ಒಂದು ಅಧ್ಯಯನ ಕೃತಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಸಿಕ್ಕಿದೆ. ಹತ್ತಾರು ಪುರಸ್ಕಾರ, ಪ್ರಶಸ್ತಿಗಳು ಇವರ ಮುಡಿಗೇರಿವೆ.

ಇವರ ಶಿಷ್ಯರು, ಅಭಿಮಾನಿಗಳು, ಸ್ನೇಹಬಳಗದಿಂದ ನಿರಾಳ ಅನ್ನೋ ಅಭಿನಂದನಾ ಗ್ರಂಥವನ್ನ ಸಹ ಬಿಡುಗಡೆ ಮಾಡಲಾಗಿದೆ. ಹೀಗೆ ಸದಾ ಕನ್ನಡದ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಡಾ.ಎಂ.ಎಂ ಪಡಶೆಟ್ಟಿ ಅವರಿಗೆ 2019ನೇ ಸಾಲಿನ ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಸಿಕ್ಕಿದೆ.

ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದ್ರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್ ನಂದೀಶ ಹಂಚಿ, ಪ್ರಶಸ್ತಿ ಪ್ರಕ್ರಿಯೆ ಕುರಿತು ಮಾತ್ನಾಡಿದ್ರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಅಭಿನಂದನ ನುಡಿಗಳನ್ನಾಡಿದ್ರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ ಕಿರಣ ಸಿಂಗ್ ಉಪಸ್ಥಿತರಿದ್ರು. ಶಂಕರ ಪ್ರಕಾಶ ನಿರೂಪಿಸಿದ್ರು. ಸೌಭಾಗ್ಯ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!