ತಪ್ಪನ್ನ ಸಮರ್ಥಿಸಿಕೊಳ್ಳುವುದು ತಪ್ಪೇ..!

1075

ಈ ಹಿಂದೆ ಎಂದು ಕಂಡು ಕೇಳರಿಯದ, ಅನುಭವಿಸದ ಪ್ರವಾಹದ ಯಾತನೆಯನ್ನ ಉತ್ತರ ಕರ್ನಾಟಕದ ಜನತೆ ಅನುಭವಿಸಿದ್ರು. ಅನುಭವಿಸ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆ ಅಕ್ಷರಶಃ ನಲುಗಿ ಹೋದ್ವು. ರಣಭಯಂಕರ ಮಳೆ, ಮಹಾರಾಷ್ಟ್ರದಿಂದ ಹರಿದು ಬಂದ ನೀರು ಈ ಭಾಗದ ಜನರ ಇಡೀ ಬದುಕನ್ನ ಕಿತ್ತುಕೊಂಡು ಬಿಡ್ತು. ಪ್ರಕೃತಿಯ ಎದುರು ಮನುಷ್ಯ ತೃಣಕ್ಕೆ ಸಮಾನ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು. ಬಾಗಲಕೋಟೆ ಜಿಲ್ಲೆಯ ಸುಮಾರು 15 ಗ್ರಾಮಗಳನ್ನ ಸುತ್ತಾಡಿದೆ. ಅಲ್ಲಿ ಕಂಡ ಸ್ಥಿತಿಯನ್ನ ಎಂದೂ ಮರೆಯಲು ಸಾಧ್ಯವಿಲ್ಲ. ಭವಿಷ್ಯದ ಬಗ್ಗೆ ಕನಸು ಕಾಣ್ತಿರುವ ಎಳೆಯ ಕಣ್ಣುಗಳಿಂದ ಹಿಡಿದು ಲೌಕಿಕ ಬದುಕನ್ನ ಪೂರ್ತಿ ಅನುಭವಿಸಿದ ಹಿರಿಯ ಜೀವಗಳ ಕಣ್ಣೊಳಗಿನ ಯಾತನೆ ಹೇಳತೀರದು.

ಬೀದಿಗೆ ಬಿದ್ದ ಜನರ ಬದುಕಿಗೆ ಮತ್ತೆ ಒಂದಿಷ್ಟು ನೆರವಾಗಿದ್ದು ಮಾಧ್ಯಮಗಳಲ್ಲಿ ಬಂದ ಸುದ್ದಿ, ಕಾರ್ಯಕ್ರಮ ಮತ್ತು ಪರಿಹಾರ ಕಾರ್ಯ. ಹೀಗಾಗಿ ನಿರಾಶ್ರಿತರ ಕೇಂದ್ರಗಳಲ್ಲಿನ ಜನ ಮಾಧ್ಯಮಗಳನ್ನ ಹಾಡಿ ಹೊಗಳ್ತಿದ್ದಾರೆ. ಕೈಮುಗಿದು ನಮಸ್ಕಾರ ಮಾಡಿ ನಿಮ್ಮ ಋಣ ತೀರಿಸಲು ಆಗದು ಅಂತಾರೆ. ಹೀಗಿರುವಾಗ ಕೆಲ ದೃಶ್ಯ ಮಾಧ್ಯಮಗಳಲ್ಲಿ ಬಂದ ಒಂದಿಷ್ಟು ಕಾರ್ಯಕ್ರಮಗಳ ಬಿಜಿ (ಬ್ಯಾಗ್ರೌಂಡ್) ಬಗ್ಗೆ ಭರ್ಜರಿಯಾಗಿ ಟ್ರೋಲ್ ಆಯ್ತು. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಸುದ್ದಿಯಾಗಿ, ಮೀಡಿಯಾವನ್ನ ಕಾಮಿಡಿ ಪೀಸ್ ತರ ಆಡಿಕೊಂಡು ನಕ್ಕರು. ಆದ್ರೆ, ನಾವು ಮಾಡಿದ ತಪ್ಪನ್ನ ಸಮರ್ಥಿಸಿಕೊಳ್ಳುವುದು ಇನ್ನು ದೊಡ್ಡ ತಪ್ಪು. ಹೊಸತನ, ವಿಭಿನ್ನ ಆಲೋಚನೆ, ಕ್ರಿಯೇಟಿವ್ ವೇಗದಲ್ಲಿ ತಪ್ಪುಗಳಾಗುವುದು ಸಹಜ. ಅದನ್ನ ಒಪ್ಪಿಕೊಂಡು ಮುಂದೆ ಸಾಗಬೇಕಿದೆ. ವಿನಾಃ ಸಮರ್ಥಿಸಿಕೊಂಡು ಮತ್ತೆ ಅದೆ ತಪ್ಪಿಗೆ ದಾರಿ ಮಾಡಿಕೊಡುವುದಲ್ಲ.

ಯೆಸ್, ಟೆಕ್ನಾಲಜಿ ನಮ್ಮ ಕಲ್ಪನೆಗೂ ಮೀರಿ ಬೆಳದಿದೆ. ಇವತ್ತಿನ ಗ್ರಾಫಿಕ್ಸ್, ಸಿಜಿ ವರ್ಕ್, ಅನಿಮೇಷನ್ ಸೇರಿದಂತೆ ಹತ್ತ ಹಲವು ಟೆಕ್ನಾಲಜಿ ಮೂಲಕ ಹೊಸ ಜಗತ್ತನ್ನು ಸೃಷ್ಟಿಸಬಹುದು. ಆದ್ರೆ, ನಾವು ಸೃಷ್ಟಿಸುವ ಜಗತ್ತು ಮೀಡಿಯಾ ಪ್ರಪಂಚಕ್ಕೆ ಒಗ್ಗುತ್ತಾ ಅನ್ನೋದು ಮುಖ್ಯ. ಫ್ಯಾಂಟಸಿ ಸಿನಿಮಾದಲ್ಲಿ ಏನು ಮಾಡಿದ್ರು ನಡೆಯುತ್ತೆ. ಅದೆ ರಿಯಲ್ ಕಥೆ ಹೇಳುವಾಗ ಅದರ ಮೂಲ ಬಿಟ್ಟು ಹೋಗಲು ಸಾಧ್ಯವಿಲ್ಲ. ಪ್ರವಾಹ ಅನ್ನೋ ಪ್ರಕೃತಿಯ ಕಡುಕೋಪಕ್ಕೆ ಬಲಿಯಾಗಿರುವುದನ್ನ ಅದರ ತೀವ್ರತೆಯನ್ನ ತೋರಿಸಲು ಹೋದಾಗ ಈ ರೀತಿಯ ಯಡವಟ್ಟುಗಳು ಆಗುತ್ತವೆ. ಅದಕ್ಕೆ ನಾವು ಆಸ್ಪದ ಕೊಡಬಾರದು. ಇವತ್ತು ನಮ್ಮ ಎಲೆಕ್ಟ್ರಾನಿಕ್ ಮೀಡಿಯಾ ಹೇಗಾಗಿದೆ ಅಂದ್ರೆ, ಸರ್ಜಿಕಲ್ ಸ್ಟ್ರೈಕ್ ಆದ್ರೆ ನಿರೂಪಕರನ್ನ ಗಡಿಯೊಳಗೆ ಹೋಗಿ ನಿಲ್ಲಿಸಿ ಬಿಡುವುದು. ಸುನಾಮಿಯಾಯ್ತು ಅಂದ್ರೆ ಸಮುದ್ರದೊಳಗೆ ತೇಲಾಡಿಸುವುದು. ಮಂಗಳಯಾನ ಅಂದಾಕ್ಷಣ ಮಂಗಳ ಗ್ರಹದ ಮೇಲೆ ನಿಲ್ಲಿಸಿ ಬಿಡುವುದು ಸೇರಿದಂತೆ ಕಾರ್ಯಕ್ರಮಕ್ಕೆ ತಕ್ಕಂತೆ ಬಿಜಿ ಮಾಡುವ ಹಾದಿಯಲ್ಲಿ ವಾಸ್ತವವನ್ನ ಮರೆತು ಬಿಡ್ತಿದ್ದೇವೆ.

ಜನರ ಕಾಣಿಗೆ ಕಾಣುವುದು ನಿರೂಪಕರು. ಐಡಿಯಾ ಕೊಟ್ಟವರಾಗ್ಲಿ, ಗ್ರಾಫಿಕ್ಸ್ ವರ್ಕ್ ಮಾಡಿದವರಾಗ್ಲಿ ಕಾಣಿಸುವುದಿಲ್ಲ. ಹೀಗಾಗಿ ನಗೆಪಾಟಿಲಿಗೆ ಈಡಾಗುವುದು ನಿರೂಪಕರು ಮತ್ತು ಚಾನಲ್. ನಿರೂಪಣೆ ಮಾಡುವರು ನೋಡುಗರಿಗೆ ಸ್ಪಷ್ಟವಾಗಿ ತಿಳಿಯುವಂತೆ ಹೇಳುವುದು. ವಿಷಯಾನುಸಾರ ಮಾತ್ನಾಡುವುದು, ವಿಕ್ಷಕರಿಗೆ ಗೊತ್ತಿರದ ಮಾಹಿತಿ ನೀಡುವುದು ಮುಖ್ಯ. ಆ್ಯಂಕರಿಂಗ್ ನೆಪದಲ್ಲಿ ಅವರ ಕೈಯಿಂದ ನಟನೆ ಮಾಡಿಸುವುದಲ್ಲ. ಹೀಗಾಗಿ ನಾವೊಂದು ಹೊಸ ಆಲೋಚನೆ ಮಾಡಿದಾಗ ಇತರರೊಡನೆ ಚರ್ಚಿಸುವುದು ತುಂಬಾ ಮುಖ್ಯ. ಯಾಕಂದ್ರೆ, ನಾವು ಮಾಧ್ಯಮದವರು. ಆದ್ರಿಂದ ಬೇರೆ ಕ್ಷೇತ್ರದವರು ಮಾಡಿದಂತೆ ನಮಗೆ ಮಾಡಲು ಆಗೋದಿಲ್ಲ. ಒಂದು ಮಾಧ್ಯಮ ಸಂಸ್ಥೆ ನಡೆಸುವುದು, ಅದರಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟವಿದೆ ಅನ್ನೋದು, ಅದರಿಂದ ಆಚೆಯಿರುವ ಜನಕ್ಕೆ ತಿಳಿಯದು. ಹೀಗಾಗಿ ಅವರು ಬಾಯಿಬಿಟ್ರೆ ಸಾಕು ಟಿಆರ್ ಪಿಗಾಗಿ ಟಿವಿಯವರು ಏನ್ ಬೇಕಾದ್ರು ಮಾಡ್ತಾರೆ ಅಂತಾರೆ. ಅದು ಹಾಗಲ್ಲಂತ ನಮ್ಮ ಕೃತಿ ಮೂಲಕ ತೋರಿಸಬೇಕಾಗಿದೆ.

ಈಗ ಭರ್ಜರಿಯಾಗಿ ಟ್ರೋಲ್ ಆಗ್ತಿರುವ ಚಾನಲ್ ಸೇರಿದಂತೆ ಕೆಲ ಸಂಸ್ಥೆಗಳ ಅನ್ನದ ಋಣ ನನ್ನ ಮೇಲಿದೆ. ನಾನು ಕೆಲಸ ಮಾಡಿದ ಪ್ರತಿಯೊಂದು ಸಂಸ್ಥೆಗಳ ಮೇಲೆ ಗೌರವ ಯಾವಾಗ್ಲೂ ಇರುತ್ತೆ. ಅದರಾಚೆಗೆ ನನ್ನದೆಯಾದ ಪತ್ರಿಕೋದ್ಯಮದ ತತ್ವ ಸಿದ್ಧಾಂತ ಇದೆಯಲ್ಲ. ಅದು ಇದನ್ನ ಹೇಳಿಸುತ್ತೆ. ಹೀಗೆ ಹೇಳಿಸುವುದರ ಹಿಂದೆ ಇರೋದು ಕಾಳಜಿ ಮತ್ತು ನನ್ನ ಕ್ಷೇತ್ರದ ಬಗ್ಗೆ ನನ್ಗೆ ಇರುವ ಪ್ರೀತಿ ಮತ್ತು ಗೌರವ. ನಮ್ಮ ವೃತ್ತಿ ಬಗ್ಗೆ ವೃತ್ತಿ ಸಂಗಾತಿಗಳ ಬಗ್ಗೆ ಬೇರೆ ಯಾರಾದ್ರು ಏನಾದ್ರೂ ಅಂದ್ರೆ ನೋವಾಗುತ್ತೆ. ಅವರು ಹೇಳ್ತಿರುವುದರಲ್ಲಿಯೂ ಸತ್ಯವಿದೆ ಅನ್ನೋದು ಅರ್ಥವಾದಾಗ ಸಮರ್ಥಿಸಿಕೊಳ್ಳಲು ಕಷ್ಟವಾಗುತ್ತೆ. ಅವರೆದರು ತಲೆ ತಗ್ಗಿಸಿ ನಿಲ್ಲೋದು ಬಿಟ್ಟು ಬೇರೆ ದಾರಿ ಕಾಣಿಸುವುದಿಲ್ಲ. ಪತ್ರಕರ್ತ ಅಂತಾ ಅಂದ್ಮೇಲೆ ಮುಗಿತು. ಪೇಪರ್, ಟಿವಿ, ಆನ್ ಲೈನ್ ಅನ್ನೋ ವಿಗಂಡನೆಯಿಲ್ಲ. ಎಲ್ಲ ಒಂದೇ. ಆದ್ರಿಂದ ನಮ್ಮ ಬಗ್ಗೆ ಜನರಾಡ್ತಿರುವ ಮಾತುಗಳ ಗಮನವಿರಬೇಕು. ನಾವು ಆಯ್ಕೆ ಮಾಡಿಕೊಂಡು ಹಾದಿ ಸರಿಯಿಲ್ಲವೆಂದು ಎಚ್ಚರಿಸುವ ಮನಸ್ಸುಗಳಿರಬೇಕು. ನಮ್ಮಲ್ಲಿ ಒಂದು ಗಾದೆ ಮಾತಿದೆ. ನಕ್ಕು ಹೇಳುವವರು ಕೆಟ್ಟದಕ್ಕೆ. ಬೈದು ಹೇಳುವವರು ಒಳ್ಳೆಯದಕ್ಕೆ ಎಂದು.

ಭೀಕರ ಪರಿಸ್ಥಿತಿಯನ್ನ ಮನಮುಟ್ಟುವಂತೆ ಕಟ್ಟಿಕೊಡುವ ಆತುರದಲ್ಲಿ ವಾಸ್ತವ ಕಳೆದುಹೋಗಬಾರದು. ಅತೀ ರಂಜನೆ ಅನಿಸಿದಾಗ ಮನೋರಂಜನೆ ಕೊಡುವ ಸಿನ್ಮಾ ಸಹ ಬೋರ್ ಆಗುತ್ತೆ. ಸುದ್ದಿ ಕೊಡುವ ಮಾಧ್ಯಮ ಆ ಕೆಲಸ ಮಾಡಿದ್ರೆ ನಂಬಿಕೆ ಕಳೆದುಕೊಳ್ಳಬೇಕಾಗುತ್ತೆ. ಮೀಡಿಯಾ ಬಗ್ಗೆ ಜನರಲ್ಲಿ ಪ್ರೀತಿ, ಗೌರವ ಇರಬೇಕು. ಆಳುವ ವರ್ಗ, ಆಡಳಿತ ವರ್ಗಗಳ ಎದೆಯಲ್ಲಿ ಭಯ ಇರಬೇಕು. ಆಗ ಮಾತ್ರ ನಮ್ಮ ಹಾದಿ ಸ್ಪಷ್ಟವಾಗಿರುತ್ತೆ. ಮೀಡಿಯಾಗೆ ಟಿಆರ್ಪಿ ಪ್ರಮುಖವಾದದ್ದು. ಒಂದು ಸಂಸ್ಥೆ ಆರ್ಥಿಕವಾಗಿ ಬಲಿಷ್ಟವಾಗಿದ್ದಾಗ ಮಾತ್ರ ತನ್ನ ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯ. ಹಾಗಂತ ನಮ್ಗೆ ನಾವೆ ಹಾಕಿಕೊಂಡಿರುವ ಗೆರೆಯನ್ನ ದಾಟಿ ಯಾವುತ್ತೂ ಹೋಗಬಾರದು.

ನಿಮ್ಮ ಅಭಿಪ್ರಾಯ ತಿಳಿಸಲು prajaastra18@gmail.com




Leave a Reply

Your email address will not be published. Required fields are marked *

error: Content is protected !!