ಸಿಂದಗಿಯಲ್ಲಿ ಪತ್ರಿಕಾ ದಿನಾಚರಣೆ

973

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿಯಲ್ಲಿಂದು ಪತ್ರಿಕಾ ದಿನಾಚರಣೆ ಆಚರಿಸಲಾಯ್ತು. ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದ ಹಿರಿಯ ಪತ್ರಕರ್ತ ದಿ.ರೇ.ಚ ರೇವಡಿಗಾರ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನ ವಿಧಾನ ಪರಿಷತ್ ಸದಸ್ಯ ಅರುಣ ಶಾಹಾಪೂರ ಹಾಗೂ ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಅವರು ಜಂಟಿಯಾಗಿ ಉದ್ಘಾಟನೆ ಮಾಡಿದ್ರು.

ಹಿರಿಯ ಪತ್ರಕರ್ತ ದಿ. ರೇ.ಚ ರೇವಡಿಗಾರರಿಗೆ ಗೌರವ ಸಲ್ಲಿಕೆ

ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಅರುಣ ಶಾಹಾಪೂರ ಅವರು, ಬಾಲ್ಯದ ದಿನಗಳಲ್ಲಿ ರೇವಡಿಗಾರರ ಪ್ರಭಾವ ತಮ್ಮ ಮೇಲೆ ಎಷ್ಟಾಗಿದೆ ಅನ್ನೋದನ್ನ ಹೇಳಿದ್ರು. ಒಂದು ಪತ್ರಿಕೆಯ ವರದಿಗಾರರಾಗಿದ್ದುಕೊಂಡು, ಹತ್ತು ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಲೇಖನ, ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡ ರೀತಿ, ಗೋಕಾಕ ಚಳವಳಿಯಲ್ಲಿ ರೇವಡಿಗಾರರ ಪಾತ್ರ ಹಾಗೂ ಅವರ ಪ್ರಾಮಾಣಿಕ ಬದುಕಿನ ಕುರಿತಂತೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡ್ರು.

ಡಾ.ಪ್ರಭುಸಾರಂಗದೇವ ಶಿವಾಚಾರ್ಯರಿಗೆ ಸನ್ಮಾನ

ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಮಾತ್ನಾಡಿ, ಸಿಂದಗಿ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ ಕರ್ನಾಟಕ ಪತ್ರಿಕೋದ್ಯಮದಲ್ಲಿ ರೇವಡಿಗಾರರ ಪಾತ್ರ ತುಂಬಾ ಮಹತ್ವದ್ದಾಗಿದೆ ಅಂತಾ ಹೇಳಿದ್ರು. ಅಲ್ದೇ, ತಾವು ಸಹ ರೇವಡಿಗಾರರ ಶಿಷ್ಯ ಅಂತಾ ಹೇಳಿದ್ರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ ಅಂತಾ ತಿಳಿಸಿದ್ರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಂಡಿದ್ರು. ಇತ್ತೀಚೆಗಷ್ಟೇ ಬೆಳಗಾವಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀಗಳನ್ನ ಇದೇ ವೇಳೆ ಗೌರವಿಸಲಾಯ್ತು. ಗೌರವ ಸ್ವೀಕರಿಸಿ ಮಾತ್ನಾಡಿದ ಶ್ರೀಗಳು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ರೇವಡಿಗಾರರು ತಮ್ಮದೆಯಾದ ಚಾಪು ಮೂಡಿಸಿದ್ದಾರೆ. ಸಾಮಾಜಿಕ ಹೋರಾಟದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದ ಅವರು, ನೇರವಂತಿಕೆಯನ್ನ ಇಟ್ಟುಕೊಂಡಿದ್ರು ಅಂತಾ ಹೇಳಿದ್ರು. ಹೋರಾಟ, ಪ್ರತಿಭಟನೆ, ಚಳವಳಿ ಅಂತಾ ಬಂದ್ರೆ ಎಲ್ಲರನ್ನ ಒಗ್ಗೂಡಿಸಿಕೊಂಡು ಹೋಗ್ತಿದ್ರು. ಯಾರೂ ಬರದೆಯಿದ್ರೆ ಒಬ್ಬರೆ ಕುಳಿತು ಹೋರಾಡುವ ವ್ಯಕ್ತಿ ಅವರಾಗಿದ್ರು ಅಂತಾ ತಿಳಿಸಿದ್ರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಹಿರಿಯ ಪತ್ರಕರ್ತ ಹಾಗೂ ತಾಲೂಕ ಘಟಕದ ಗೌರವಾಧ್ಯಕ್ಷ ಶಾಂತೂ ಹಿರೇಮಠ ಅವರು, ತಮ್ಮ ಹಾಗೂ ರೇವಡಿಗಾರರ ಜೊತೆಗಿನ ಒಡನಾಟದ ದಿನಗಳನ್ನ ನೆನಪಿಸಿಕೊಂಡ್ರು. ಸಮಾನ ಮನಸ್ಕರು ಸೇರಿ ಇಂತಹದೊಂದು ಕಾರ್ಯಕ್ರಮ ಮಾಡಿದ್ದಕ್ಕೆ ಸಂತಸವಾಗ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನ ಮಾಡಿಕೊಂಡು ಬರೋಣ ಅನ್ನೋ ಮಾತನ್ನ ಹೇಳಿದ್ರು.

ಸಿಂದಗಿಯಲ್ಲಿ ಪತ್ರಕರ್ತರ ಕಟ್ಟಡ ನಿರ್ಮಾಣಕ್ಕಾಗಿ ಮನವಿ ಸಲ್ಲಿಕೆ

ಇನ್ನು ಸಿಂದಗಿಯಲ್ಲಿ ಪತ್ರಕರ್ತರಿಗಾಗಿ ಕಟ್ಟಡ ನಿರ್ಮಾಣ ಮಾಡುವ ಕುರಿತಾಗಿ ವಿಧಾನಪರಿಷತ್ ಸದಸ್ಯ ಅರುಣ ಶಾಹಾಪೂರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಮನಗೂಳಿ ಅನುಪಸ್ಥಿತಿಯಲ್ಲಿ ಅವರ ಪುತ್ರ ಹಾಗೂ ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು.

ಇದೇ ವೇಳೆ ಪ್ರಜಾಸ್ತ್ರ ವೆಬ್ ಪೋರ್ಟಲ್ ಸಂಪಾದಕರಾದ ನಾಗೇಶ ತಳವಾರ ಅವರು, ಮಾಧ್ಯಮ ಜಗತ್ತಿನ ಹಲವು ಆಯಾಮಗಳು ಹಾಗೂ ಪತ್ರಕರ್ತರ ಕಾರ್ಯಶೈಲಿ ಕುರಿತು ಉಪನ್ಯಾಸ ನೀಡಿದ್ರು. ಕಾರ್ಯಕ್ರಮದಲ್ಲಿ ರಕ್ತದಾನ ಶಿಬರ ಸಹ ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 45ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ರು.

ರಕ್ತದಾನ ಮಾಡಿದ ಸಾರ್ವಜನಿಕರು

ಮುಖ್ಯ ಅತಿಥಿಯಾಗಿ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾದ ಶರಣು ಮಸಳಿ, ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲಾಪುರ, ನಿರ್ಗಮಿತ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಭಾವಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಇಂದುಶೇಖರ ಮಣೂರು ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಸಿದ್ಧಲಿಂಗ ಕಿಣಗಿ ನಿರೂಪಿಸಿದ್ರು. ಪಂಡಿತ ಯಂಪೂರೆ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!