ಮಹಿಳಾ ಪತ್ರಕರ್ತರ ನೈಟ್ ಶಿಫ್ಟ್ ಡ್ಯೂಟಿ ಮತ್ತು ಅಂತರಂಗದ ಯಾತನೆ…!

1440

ಎಲೆಕ್ಟ್ರಾನಿಕ್ ಮೀಡಿಯಾ ಯಾವಾಗ 24X7 ಆಯ್ತೋ ಆಗಿನಿಂದ ಕೆಲಸದ ಸಮಯ ಸಹ ಬದಲಾಯ್ತು. ಹೀಗಾಗಿ ಮೂರು ಪಾಳೆಯದಲ್ಲಿ ಕೆಲಸ ಮಾಡುವ ಸಂಸ್ಕೃತಿ ಬೆಳೆಯಿತು. ಟಿವಿ ಮಾಧ್ಯಮದಲ್ಲಿ ಮುಂಜಾನೆ, ಮಧ್ಯಾಹ್ನ ಹಾಗೂ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಿಕೊಂಡು ಬರಲಾಗ್ತಿದೆ. ಇಲ್ಲಿ ಗಂಡ್ಮಕ್ಕಳು ಹಾಗೂ ಹೆಣ್ಮಕ್ಕಳ ಅನ್ನೋ ಯಾವ ವ್ಯತ್ಯಾಸವಿಲ್ಲ. ಅವರವರ ಡಿಪಾರ್ಟ್ ಮೆಂಟ್ ಮುಖ್ಯಸ್ಥರು ಹಾಕಿದ ಶಿಫ್ಟ್ ಪ್ರಕಾರ ಕೆಲಸ ಮಾಡಬೇಕು. ಇದೇನು ಹೊಸದಲ್ಲ. ಇವತ್ತಿನ ಮಲ್ಟಿನ್ಯಾಷನಲ್ ಕಂಪನಿಯಿಂದ ಹಿಡಿದು ಸಣ್ಣಪುಟ್ಟ ಕಾರ್ಖಾನೆಗಳಲ್ಲಿಯೂ ಇದೆ ರೀತಿ ಇದೆ ಅಂತಾ ಹೇಳಬಹುದು. ಬಟ್, ಹೆಣ್ಮಕ್ಕಳನ್ನ ರಾತ್ರಿ ಪಾಳೆಯದಲ್ಲಿ ಡ್ಯೂಟಿ ಮಾಡಿಸುವುದು ಅಷ್ಟೊಂದು ಸೂಕ್ತವಲ್ಲ ಅನ್ನೋ ಮಾತು ಮೊದಲಿನಿಂದ ಕೇಳಿ ಬರ್ತಿದೆ.

ನಾನು ಈ ವಿಚಾರವನ್ನ ಕೇವಲ ಮೀಡಿಯಾಗೆ ಸಂಬಂಧಿಸಿದಂತೆ ಹೇಳ್ತಿಲ್ಲ. ನನ್ನ ಕ್ಷೇತ್ರವನ್ನ ಕೇಂದ್ರವಾಗಿಟ್ಟುಕೊಂಡು ಉಳಿದ ಕ್ಷೇತ್ರಗಳ ಬಗ್ಗೆಯೂ ಹೇಳುತ್ತಿದ್ದೇನೆ. ನೈಟ್ ಶಿಫ್ಟ್ ಹೆಣ್ಮಕ್ಕಳಿಗೆ ತುಂಬಾ ಕಷ್ಟದ ಮತ್ತು ಹಿಂಸೆಯ ಕೆಲಸ. ಬದುಕಿನ ಅನಿವಾರ್ಯತೆಗೆ, ಯಾವುದೋ ಒತ್ತಡಕ್ಕೆ ಮಣಿದು ಆಕೆ ಕೆಲಸ ಮಾಡ್ತಿದ್ದಾಳೆ. ನೈಸರ್ಗಿಕವಾಗಿ ಹೆಣ್ಣು ಸಾಕಷ್ಟು ಸವಾಲುಗಳನ್ನ ಎದುರಿಸ್ತಿರ್ತಾಳೆ. ಗಂಡಿಗೆ ಅದರ ಯಾತನೆ ಗೊತ್ತಿಲ್ಲ. ಮದುವೆ ಮುಂಚೆ ಹಾಗೂ ಮದುವೆ ನಂತರ ವಿಭಿನ್ನವಾದ ಸವಾಲು ಮತ್ತು ಸಮಸ್ಯೆಗಳನ್ನ ಎದುರಿಸಬೇಕಾದವಳಿಗೆ, ನೈಟ್ ಶಿಫ್ಟ್ ಡ್ಯೂಟಿ ಅಷ್ಟೊಂದು ಸರಿಯಾಗಿಲ್ಲ.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ರಾತ್ರಿ 11 ರಿಂದ ಬೆಳಗ್ಗೆ 8 ಗಂಟೆಯ ತನಕ ಡ್ಯೂಟಿ ಇರುತ್ತೆ. ವಾರದ ಶಿಫ್ಟ್ ಬಳಿಕ ಕೆಲವೊಮ್ಮೆ ಮರುದಿನ ಮಧ್ಯಾಹ್ನದವರೆಗೂ ಕಂಟಿನ್ಯೂ ಆಗುತ್ತೆ. ಇದು ಆಕೆಯ ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ. ಇದನ್ನ ಗಂಡ್ಮಕ್ಕಳ ಜೊತೆ ಹಂಚಿಕೊಳ್ಳಲು ಆಗುವುದಿಲ್ಲ. ನೀವು ಕೇಳಬಹುದು, ರಾತ್ರಿ ಯಾವ ಕೆಲಸವಿರುತ್ತೆ ಅಂತ. ಎಷ್ಟು ಜನಕ್ಕೆ ಗೊತ್ತಿದೆಯೋ ಗೊತ್ತಿಲ್ಲವೋ ಬೆಳಗ್ಗೆ 6ಗಂಟೆಯಿಂದಲೇ ಲೈವ್ ನ್ಯೂಸ್ ಶುರುವಾಗುತ್ತೆ. 8 ಗಂಟೆಯ ಶಿಫ್ಟ್ ನವರು ಬರುವುದರೊಳಗೆ ಮೂರು ಬುಲೆಟಿನ್ ಮುಗಿದಿರುತ್ತೆ. ಅದಕ್ಕೆ ಬೇಕಾದ ನ್ಯೂಸ್, ಪ್ಯಾಕೇಜ್, ಸ್ಟೋರಿಗಳನ್ನ ರಾತ್ರಿ ಟೈಂನಲ್ಲಿ ರೆಡಿ ಮಾಡಬೇಕು.

ಡೆಸ್ಕ್, ವಿಡಿಯೋ ಎಡಿಟಿಂಗ್ ವಿಭಾಗ, ಪಿಸಿಆರ್, ಗ್ರಾಫಿಕ್ಸ್, ಕಾರ್ ರೂಮ್, ಲೈಬ್ರರಿ ಸೇರಿದಂತೆ ಬಹುತೇಕ ವಿಭಾಗದವರು ನೈಟ್ ಡ್ಯೂಟಿ ಮಾಡ್ತಾರೆ. ರಾತ್ರಿ ಸ್ವಲ್ಪ ಹೊತ್ತು ಸಿಗುವ ಟೈಂನಲ್ಲಿ ಕೋಳಿ ನಿದ್ದೆ ಮಾಡಬೇಕು. ಗಂಡ್ಮಕ್ಕಳಾದ್ರೆ ಪಿಸಿಆರ್, ಗ್ರಾಫಿಕ್ಸ್ ರೂಮ್, ವೈಸ್ ಬೂತ್, ಇನ್ ಜಸ್ಟ್ ಸೇರಿ ಕೆಲವು ಕಡೆ ಮಲಗಿ ಬಿಡ್ತಾರೆ. ಆದ್ರೆ, ಹೆಣ್ಮಕ್ಕಳು ಹಾಗೇ ಮಾಡಲು ಆಗುವುದಿಲ್ಲ. ಕುರ್ಚಿಯಲ್ಲಿ ಕುಳಿತಲ್ಲಿಯೇ ತೂಕಡಿಸಬೇಕು. ಹೀಗಿದ್ರೂ ಅವರಿಗೆ ಮುಜುಗರ. ಈ ಕಾರಣಕ್ಕೆ ಎಷ್ಟೋ ಹೆಣ್ಮಕ್ಕಳು ಕುರ್ಚಿ ಮೇಲೆ ಸಹ ಮಲಗದೆ ಇರೋದನ್ನ ನಾನು ನೋಡಿದ್ದೇನೆ. ಇದು ಒಂದು ದಿನದ ಕಥೆಯಲ್ಲ. ನೈಟ್ ಶಿಫ್ಟ್ ಇರುವ ವಾರಪೂರ್ತಿ. ಹಗಲು ಹೊತ್ತಿನಲ್ಲಿ ಎಷ್ಟೇ ನಿದ್ದೆ ಮಾಡಿದ್ರೂ ರಾತ್ರಿ ಮಲಗಿದಷ್ಟು ಮನಸ್ಸು ಉಲ್ಲಾಸದಿಂದ ಇರುವುದಿಲ್ಲ. ಇದು ಗಂಡ್ಮಕ್ಕಳಿಗೂ ಅನ್ವಯಿಸುತ್ತೆ. ಆದ್ರೆ, ಹೆಣ್ಮಕ್ಕಳಿಗೆ ಇನ್ನೂ ಕಷ್ಟ.

ಜಗತ್ತು ಎಷ್ಟೇ ಮುಂದುವರೆಯಿಲಿ, ಹೆಣ್ಮಕ್ಕಳು ನಾವು ಸ್ವತಂತ್ರರು, ಗಂಡ್ಮಕ್ಕಳಿಗಿಂತ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ ಅನ್ನುವುದನ್ನ ಒಪ್ಪಿಕೊಳ್ಳುವುದರ ಜೊತೆಗೆ ಕೆಲವು ವಿಚಾರಗಳಲ್ಲಿ ಹೆಣ್ಣು ಅನಿವಾರ್ಯವಾಗಿ, ಬದುಕಿನ ಒತ್ತಡದಿಂದ ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತಾಳೆ. ಅದರಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವುದು ಸಹ ಒಂದಾಗಿದೆ. ರಾತ್ರಿ ಪೂರ್ತಿ ದುಡಿಯುವ ಪ್ರಕ್ರಿಯೆ ಪ್ರಕೃತಿಯ ವಿರುದ್ಧವಾಗಿ ಚಲಿಸುವುದಾಗಿದೆ. ಈ ರೀತಿಯ ಕೆಲಸದಿಂದ ಆಚೆ ನಿಂತು ನೋಡುವವರು, ಹೆಣ್ಮಕ್ಕಳ ಪರವಾಗಿದ್ದೇವೆ ಅಂತಾ ಹೇಳುವವರು, ಹೀಗೆ ಹೇಳುವ ಮೂಲಕ ಹೆಣ್ಣು ಗಟ್ಟಿಗಿತ್ತಿಯಲ್ಲ. ಆಕೆಯಿಂದ ಕೆಲವೊಂದು ಕೆಲಸ ಮಾಡಲು ಆಗುವುದಿಲ್ಲ ಅಂತಾ ಹೇಳುವ ತಂತ್ರವಾಗಿದೆ ಅಂತಾ ಹೇಳಬಹುದು. ಆದ್ರೆ, ವಾಸ್ತವದ ಚಿತ್ರಣ ಬೇರೆಯದ್ದೇ ಆಗಿರುತ್ತೆ.

ಇನ್ನು ಮದುವೆ ಬಳಿಕ ಮೀಡಿಯಾದಲ್ಲಿ ಬಹುತೇಕ ಹೆಣ್ಮಕ್ಕಳು ಉಳಿಯುವುದಿಲ್ಲ. ಕಾರಣ, ಅವರು ಗಂಡನ ಮನೆಗೆ ಹೋಗ್ತಾರೆ ಅನ್ನೋದಾದ್ರೆ, ಬೆಂಗಳೂರಿನಲ್ಲಿಯೇ ವೈವಾಹಿಕ ಜೀವನ ನಡೆಸುವವರು ಸಹ ಮೀಡಿಯಾದಲ್ಲಿ ವೃತ್ತಿಯನ್ನ ಮುಂದುವರೆಸುವುದು ತುಂಬಾ ಕಡಿಮೆ. ಯಾಕಂದ್ರೆ ಈ ನೈಟ್ ಶಿಫ್ಟ್ ಸಹ ಕಾರಣವಾಗಿದೆ. ಇದನ್ನ ತಿಳಿದುಕೊಂಡಿರುವ ಮೀಡಿಯಾ ಜಗತ್ತು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಮಕ್ಕಳಿಗೆ ಕೆಲಸ ಕೊಡುವುದಿಲ್ಲ. ಮದುವೆಯಾದವರು ಕೆಲಸ ಕೇಳಲು ಹೋದ್ರೆ ನಿಮ್ಗೆ ಹೆಚ್ಆರ್ ಕಡೆಯಿಂದ ಫೋನ್ ಬರುತ್ತೆ ಅಂದ್ರೆ ಅಲ್ಲಿಗೆ ಕಥೆ ಮುಗಿಯಿತು. ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಾನಿಕ್ ಮೀಡಿಯಾ ಹೆಣ್ಮಕ್ಕಳಿಗೆ ರಾತ್ರಿ ಪಾಳೆಯ ಕೆಲಸದಿಂದ ಮುಕ್ತಿ ನೀಡಬೇಕು.

ಕನ್ನಡದ ಒಂದೆರೆಡು ಸುದ್ದಿ ವಾಹಿನಿಗಳಲ್ಲಿ ಹೆಣ್ಮಕ್ಕಳಿಗೆ ನೈಟ್ ಶಿಫ್ಟ್ ಇಲ್ಲ. ಉಳಿದಂತೆ ಎಲ್ಲ ಚಾನೆಲ್ ಗಳಲ್ಲಿದೆ. ಅಭಿವೃದ್ಧಿ ಹೊಂದಿದ ದೇಶ, ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿನ ಮೀಡಿಯಾಗಳಲ್ಲಿಯೂ ಹೆಣ್ಮಕ್ಕಳು ರಾತ್ರಿ ಟೈಂನಲ್ಲಿ ಕೆಲಸ ಮಾಡ್ತಾರೆ ಅಂತಾ ಹೇಳಬಹುದು. ಅವರವರ ಸಮಸ್ಯೆಗಳು ಅವರಿಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ ಮಾಧ್ಯಮ ಲೋಕ ಈ ನಿಟ್ಟಿನಲ್ಲಿ ವಿಚಾರ ಮಾಡಿದಾಗ ಐಟಿಬಿಟಿ ಕಂಪನಿ, ಕಸ್ಟ್ ಮರ್ ಕೇರ್ ಸೇರಿದಂತೆ ಸಣ್ಣಪುಟ್ಟ ಕಾರ್ಖಾನೆಗಳಲ್ಲಿಯೂ ಈ ಬದಲಾವಣೆ ಬರಲು ಸಾಧ್ಯ. ನಮ್ಮದೊಂದು ಆಲೋಚನೆ ಹೆಣ್ಮಕ್ಕಳ ಸೈಲೆಂಟ್ ನೋವಿಗೆ ಸಹಾಯವಾಗಬಹುದು.




Leave a Reply

Your email address will not be published. Required fields are marked *

error: Content is protected !!