ನಾಲ್ಕನೇ ಅಂಗದೊಳಗೆ ಯಾರಿಗೆಷ್ಟು ಸ್ಥಾನಮಾನ?

1436

ಪ್ರಿಯ ಓದುಗರೆ.. ಸುದ್ದಿ ಮನೆ ಅನ್ನೋದು ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಆಳಕ್ಕೆ ಇಳಿದಷ್ಟು ಇಲ್ಲಿನ ಹಲವು ಮುಖಗಳ ಪರಿಚಯವಾಗುತ್ತೆ. ಅದರಲ್ಲಿ ಅಸಂಘಟಿತವಾಗಿ ತಮ್ಮವರಿಗಾಗಿ ಯಾವುದೇ ಸದ್ದು ಗದ್ದಲವಿಲ್ಲದೆ ಕೆಲಸ ಮಾಡಲಾಗುತ್ತೆ. ಇದನ್ನ ಸೂಕ್ಷ್ಮವಾಗಿ ಗಮನಿಸಿದಾಗ ಅದರ ಬಿಸಿ ನಮ್ಮ ಅನುಭವಕ್ಕೆ ಬರುತ್ತೆ. ಎಲ್ಲೆಡೆ ಸಮಾನತೆ ತರುವ ಬಗ್ಗೆ ಪುಟಗಟ್ಟಲೆ ಬರೆಯುವ, ಗಂಟೆಗಟ್ಟಲೆ ಭಾಷಣ ಮಾಡುವ ಮಾಧ್ಯಮಗಳಲ್ಲಿನ ಸಮಾನತೆ ಕುರಿತು ಇತ್ತೀಚೆಗೆ ವರದಿಯೊಂದು ಬಂದಿದೆ. ಅದನ್ನ ಓದಿದಾಗ ಮೀಡಿಯಾ ಪ್ರಪಂಚದಿಂದ ದೂರು ಇರುವವರಿಗೆ ಗೊತ್ತಾಗುತ್ತೆ ಸುದ್ದಿ ಮನೆಯೊಳಗಿನ ಸೈಲೆಂಟ್ ವಿಚಾರ.

ಭಾರತೀಯ ಮೀಡಿಯಾ ಜಗತ್ತಿನಲ್ಲಿ ಮೇಲ್ಜಾತಿಗಳ ಪ್ರಾಬಲ್ಯ ಮತ್ತು ಸುದ್ದಿಗಳಲ್ಲಿ ವಿಶೇಷತೆಯನ್ನ ತರುವಲ್ಲಿ ಫೇಲ್ ಆಗಿವೆ ಅನ್ನೋ ವರದಿಯನ್ನ ‘ಆಕ್ಸ್ ಫಾಮ್ ಇಂಡಿಯಾ’ ಮತ್ತು ‘ನ್ಯೂಸ್ ಲಾಂಡ್ರಿ’ ರಿಲೀಸ್ ಮಾಡಿವೆ. ‘ಹೂ ಟೆಲ್ಸ್ ಅವರ್ ಸ್ಟೋರೀಸ್ ಮ್ಯಾಟರ್ಸ್: ರೆಪ್ರೆಸೆಂಟೇಷನ್ ಆಫ್ ಮಾರ್ಜಿನಲೈಸ್ಡ್ ಕಾಸ್ಟ್ ಗ್ರೂಪ್ಸ್ ಇನ್ ಇಂಡಿಯನ್ ನ್ಯೂಸ್ ರೂಮ್ಸ್’ ಅನ್ನೋ ವರದಿಯಲ್ಲಿ ಭಾರತೀಯ ಮಾಧ್ಯಮದಲ್ಲಿ ವರ್ಗಗಳ ಪ್ರಾತಿನಿಧ್ಯ ಕುರಿತು ಅಧ್ಯಯನ ನಡೆಸಿದೆ. ಈ ವರದಿಯನ್ನ ಸುದ್ದಿ ಮನೆಯಲ್ಲಿರುವ ಬಹುತೇಕರು ಒಪ್ಪಿಕೊಳ್ಳುವುದಿಲ್ಲ. ಕಾರಣ, ಇದು ಕಹಿ ಸತ್ಯವನ್ನ ಹೇಳಿದೆ. ಅದನ್ನು ಕುಡಿದು ಅರಗಿಸಿಕೊಳ್ಳುವ ಶಕ್ತಿ ಇಲ್ಲಿನವರಿಗಿಲ್ಲ!

ಈ ದೇಶದಲ್ಲಿ ಜಾತಿ, ಧರ್ಮ ಅನ್ನೋದು ಗಾಳಿಯಲ್ಲಿಯೇ ಬೆರತು ಹೋಗಿದೆ. ಹೀಗಾಗಿ ಎಲ್ಲಿಯೇ ಹೋದ್ರೂ ಮೊದ್ಲು ಕೇಳುವುದು ನಿನ್ನ ಜಾತಿ ಯಾವುದು ಅಂತ. ಇದು ಮಾಧ್ಯಮ ಲೋಕವನ್ನ ಸಹ ಬಿಟ್ಟಿಲ್ಲ. ಆದ್ರೆ, ಇಲ್ಲಿ ಓಪನ್ ಆಗಿ ಕೇಳುವುದಿಲ್ಲ. ನಾನು ಕೆಲಸ ಮಾಡಿದ ಸುದ್ದಿ ಸಂಸ್ಥೆಯೊಳಗಿನ ವ್ಯವಸ್ಥೆಯನ್ನ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಲ್ಲಿರುವವರೆಲ್ಲ ನಮ್ಮವರು. ಆದ್ರೂ ನಮ್ಮವರಾಗಿರುವುದಿಲ್ಲ. ಯಾಕಂದ್ರೆ, ಜಾತಿ ಅನ್ನೋದು ತನ್ನಪಾಡಿಗೆ ತಾನು ಕೆಲಸ ಮಾಡ್ತಿರುತ್ತದೆ. ಹೀಗಾಗಿ ಅನೇಕ ಸಾರಿ ಟ್ಯಾಲೆಂಟ್ ಲೆಕ್ಕಕ್ಕೆ ಬರುವುದಿಲ್ಲ. ಅವರಿಗೆ ಗೊತ್ತಿಲ್ಲದೆ ಅವರನ್ನ ಸೈಡ್ ಲೈನ್ ಮಾಡಲಾಗುತ್ತೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ.

ವರದಿಗಾರರು, ನಿರೂಪಕರು, ಸಂಪಾದಕರು, ಪ್ಯಾನಲಿಸ್ಟ್ ಗಳ ಜಾತಿ.. ಬೈಲೈನ್ ಎಣಿಕೆ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಹಲವಾರು ಪದ್ಧತಿಗಳನ್ನ ಅನುಸರಿಸಿ ಅಕ್ಟೋಬರ್ 2018ರಿಂದ ಮಾರ್ಚ್ 2019ರ ಅವಧಿಯಲ್ಲಿ 6 ಇಂಗ್ಲಿಷ್, 7 ಹಿಂದಿ ಪತ್ರಿಕೆಗಳು, 14 ಟಿವಿಗಳಲ್ಲಿನ ಚರ್ಚಾ ಕಾರ್ಯಕ್ರಮ, 11 ಡಿಜಿಟಲ್ ಸುದ್ದಿ ತಾಣಗಳು, 12 ಮ್ಯಾಗಸೀನ್ ಗಳನ್ನ ಪರಿಶೀಲನೆಗೆ ಒಳಪಡಿಸಲಾಗಿತ್ತು. ಯಾವ ಸಮುದಾಯ, ಜಾತಿಗೆ ಎಷ್ಟೊಂದು ಪ್ರಾತಿನಿಧ್ಯ ನೀಡಲಾಗಿದೆ ಅನ್ನೋದಕ್ಕಾಗಿ 65 ಸಾವಿರಕ್ಕೂ ಹೆಚ್ಚು ಲೇಖನ ಹಾಗೂ ಸುದ್ದಿವಾಹಿನಿಗಳಲ್ಲಿನ ಚರ್ಚೆಗಳ ವಿಶ್ಲೇಷಣೆಯನ್ನ ‘ಆಕ್ಸ್ ಫಾಮ್ ಇಂಡಿಯಾ’ ಮತ್ತು ‘ನ್ಯೂಸ್ ಲಾಂಡ್ರಿ’ ಮಾಡಿವೆ.

121 ನ್ಯೂಸ್ ಚಾನೆಲ್ ಗಳಲ್ಲಿನ ಎಡಿಟರ್ ಇನ್ ಚೀಫ್, ಮ್ಯಾನೇಜಿಂಗ್ ಎಡಿಟರ್, ಎಕ್ಸಿಕ್ಯೂಟಿವ್ ಎಡಿಟರ್, ಬ್ಯೂರೋ ಚೀಫ್, ಇನ್ ಪುಟ್/ಔಟ್ ಪುಟ್ ಚೀಫ್ ಹುದ್ದೆಗಳಲ್ಲಿ 106 ಹುದ್ದೆಗಳು ಮೇಲ್ಜಾತಿಯವರು ಹೊಂದಿದ್ದಾರೆ. 5 ಹಿಂದೂಳಿದ ವರ್ಗ, 6 ಅಲ್ಪಸಂಖ್ಯಾತ ವರ್ಗ, ನಾಲ್ವರ ಜಾತಿಗಳನ್ನ ಗುರುತಿಸಲು ಸಾಧ್ಯವಾಗಿಲ್ಲವೆಂದು ತಿಳಿಸಿದೆ. 40 ಹಿಂದಿ ಹಾಗೂ 47 ಇಂಗ್ಲಿಷ್ ಚಾನೆಲ್ ಗಳಲ್ಲಿನ ನಿರೂಪಕರ ಪೈಕಿ ನಾಲ್ವರಲ್ಲಿ ಮೂವರು ಮೇಲ್ಜಾತಿಯವರು. ಶೇಕಡ 70 ರಷ್ಟು ಮೇಲ್ವರ್ಗದವರಿದ್ದಾರೆ. ಶೇಕಡ 72ರಷ್ಟು ಬೈಲೈನ್ ಸುದ್ದಿಗಳು ಸಹ ಅದೇ ಮೇಲ್ಜಾತಿಗೆ ಸೇರಿದವರದ್ದಾಗಿದೆ ಎಂದು ತಿಳಿಸಿದೆ. ಹೀಗೆ ಇನ್ನು ಸಾಕಷ್ಟು ವಿಷಯಗಳನ್ನ ಈ ಒಂದು ವರದಿಯಲ್ಲಿ ಮೂಡಿ ಬಂದಿದೆ.

ಇದನ್ನ ನೋಡಿದಾಗ ನನ್ಗೂ ಸುಳ್ಳು ಅಂತಾ ಅನಿಸಲಿಲ್ಲ. ಯಾಕಂದ್ರೆ, ನಿಮಗೊಂದು ಉದಾಹರಣೆ ಹೇಳುತ್ತೇನೆ. ಟಿವಿ ಮೀಡಿಯಾದಲ್ಲಿ ಹೆಸರು ಮಾಡಿರುವ, ಒಂದು ಸುದ್ದಿವಾಹಿನಿಯನ್ನ ಕಟ್ಟಿದ ತಂಡವೊಂದು ಮತ್ತೊಂದು ಚಾನೆಲ್ ಹುಟ್ಟಿಗೆ ರೆಡಿಯಾಗಿತ್ತು. ಅದರಲ್ಲಿ ಪ್ರಮುಖ ಹುದ್ದೆಗಳನ್ನ ಹೊಂದಿದ ಪ್ರತಿಯೊಬ್ಬರು ನನ್ನ ಆತ್ಮೀಯರು. ಆ ಹಿರಿಯರ ಜೊತೆ ಕೆಲಸ ಮಾಡಿದ್ದ ನಾನು, ಅವರ ಟೀಂ ಸೇರಿದ್ದೆ. ಎಲ್ಲೂ ಅವರು ಜಾತಿವಾದಿಗಳಂತೆ ಕಂಡಿಲ್ಲ. ಹಾಗೆ ನಡೆದುಕೊಂಡಿಲ್ಲ. ನನ್ನ ಪ್ರತಿಭೆ ಗುರುತಿಸಿ ಹೊಸ ಜವಾಬ್ದಾರಿ ನೀಡಿದ್ರು. ಎಲ್ಲರೂ ಒಟ್ಟಿಗೆ ನಿತ್ಯ ಊಟ, ಆಗಾಗ ಪಾರ್ಟಿ ಮಾಡಿದ್ದೇವೆ. ಹೊಸ ಚಾನೆಲ್ ಇನ್ನೇನು ಲಾಂಚ್ ಆಗಬೇಕು, ಅಷ್ಟರಲ್ಲಿ ಅದರ ಕಥೆ ಮುಗಿಯ್ತು. ಆಗ ಒಬ್ಬೊಬ್ಬರು ಒಂದೊಂದು ಚಾನೆಲ್, ಪೇಪರ್, ಹೊಸದಾಗಿ ಬರ್ತಿರುವ ಸುದ್ದಿ ವಾಹಿನಿಗಳ ಕದ ಬಡೆಯಲು ಶುರು ಮಾಡಿದ್ವಿ.

ಒಂದು ತಿಂಗಳ ಕಾಲ ಕೆಲಸಕ್ಕಾಗಿ ಒಂದಿಷ್ಟು ಅಲೆದಾಟ ಶುರುವಾಯ್ತು. ಒಂದು ಪ್ರಮುಖ ಸುದ್ದಿವಾಹಿನಿಯಲ್ಲಿ ಸಂದರ್ಶನಕ್ಕೆ ಹೋದೆ. ಎಡಿಟರ್ ಕೇಳಿದ ಪ್ರತಿಯೊಂದಕ್ಕೂ ಉತ್ತರ ಕೊಟ್ಟೆ. ಅವರು ನಾ ಕೇಳಿದ ಹುದ್ದೆ ಬಿಟ್ಟು ಮತ್ತೊಂದು ಹುದ್ದೆ ಖಾಲಿಯಿದೆ. ಇದರಲ್ಲಿ ಕೆಲಸ ಮಾಡ್ತೀರಾ ಅಂದ್ರು. ಇಲ್ಲ ಸರ್, ಆಗಲ್ಲ ಅಂದೆ. ಆಯ್ತು, ಹೊರಗಡೆ ಫಾರ್ಮ್ ಕೊಡ್ತಾರೆ ಅದನ್ನ ತುಂಬಿ ಕೊಡಿ ನಾವು ಸಂಸ್ಥೆಗೆ ಕಳಿಸಬೇಕು ಅಂದ್ರು. ಅವರು ಕೊಟ್ಟ ಅರ್ಜಿಯಲ್ಲಿ ಜಾತಿಯ ಕಾಲಂ ಇತ್ತು. ಆಗ್ಲೇ ನನ್ಗೆ ಡೌಟ್ ಬಂದಿತ್ತು. ಆದ್ರೂ ಬರೆದು ಕೊಟ್ಟು ಬಂದೆ. ನಾನು ಅಂದುಕೊಂಡಂತೆ ಅಲ್ಲಿ ನನ್ಗೆ ಕೆಲಸ ಸಿಗ್ಲಿಲ್ಲ. ಬಳಿಕ ಮತ್ತೊಂದು ಚಾನೆಲ್ ಸೇರಿಕೊಂಡೆ. ಆದ್ರೆ, ಈ ಹಿಂದೆ ನಾನು ಕೆಲಸ ಮಾಡಿದ್ದ ಸಂಸ್ಥೆಯ ಹಿರಿಯರು ಮತ್ತು ಆತ್ಮೀಯರು ಅಲ್ಲಿಗೆ ಹೋದ್ರು, ಸೆಲೆಕ್ಟ್ ಆದ್ರು. ಆಗ ನಾನು ಅವರಿಗೆ ಹೇಳಿದೆ, ಸರ್ ನಿಮ್ಮ ಜಾತಿ ವರ್ಕೌಟ್ ಆಗಿದೆ ಎಂದು.

ಇದು ಸಣ್ಣ ಉದಾಹರಣೆ. ಇವತ್ತು ಮೀಡಿಯಾ ಜಗತ್ತು ಯಾರ ಕಂಟ್ರೋಲ್ ನಲ್ಲಿದೆ. ಅವರು ಯಾರಿಗೆ ಮಣೆ ಹಾಕ್ತಿದ್ದಾರೆ ಅನ್ನೋದು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತೆ. ಇನ್ಮುಂದೆ ಡ್ಯಾಷ್ ಬೋರ್ಡ್ ಬದಲಾಗಬಹುದು ಅನ್ನೋ ಆಸೆಯಿದೆ.

ನಿಮ್ಮ ಅಭಿಪ್ರಾಯಗಳಿಗಾಗಿ : prajaastra18@gmail.com




Leave a Reply

Your email address will not be published. Required fields are marked *

error: Content is protected !!