ಹೀಗೊಂದು ಆಲೋಚನೆ ನಿಮ್ಮ ಮನದಂಗಳಕ್ಕೆ ಕಳುಹಿಸುತ್ತಿದ್ದೇನೆ…

411

ಮನುಷ್ಯ ಎಷ್ಟೇ ಸಂಪಾದನೆ ಮಾಡ್ಲಿ, ಹಸಿದಾಗ ಅವನಿಗೆ ಬೇಕಾಗುವುದು ಒಂದಿಷ್ಟು ಅನ್ನ. ಆದ್ರೆ, ಹಗಲು ರಾತ್ರಿ ದುಡಿಯುವ ಅದೆಷ್ಟೋ ಜನರಿಗೆ ಸರಿಯಾದ ಟೈಂಗೆ ಊಟ ಸಿಗೋದಿಲ್ಲ. ಕಾರಣ, ಕೆಲಸದ ಒತ್ತಡ. ಅದರಲ್ಲೂ ಮೀಡಿಯಾ ಹೌಸ್ ಗಳಲ್ಲಿ ಕೆಲಸ ಮಾಡುವ ಸಂಗಾತಿಗಳ ಪರಿಸ್ಥಿತಿ ಏನು ಅನ್ನೋದು ನನ್ಗೆ ಚೆನ್ನಾಗಿ ಗೊತ್ತು. ಮೂರು ಶಿಫ್ಟ್ ನಲ್ಲಿ ಕೆಲಸ ಮಾಡುವ ಅದೆಷ್ಟೋ ಪತ್ರಕರ್ತರು ಸರಿಯಾಗಿ ಊಟ ಮಾಡುವುದಕ್ಕೆ ಆಗ್ತಿಲ್ಲ. ಫ್ಯಾಮಿಲಿ ಇದ್ರೆ ತೊಂದ್ರೆಯಿಲ್ಲ. ಆದ್ರೆ, ಆಚೆಯಿಂದ ಬಂದು ರೂಮ್ ಮಾಡಿಕೊಂಡು ಕೆಲಸ ಮಾಡುವವರ ಹೈರಾಣು ಇದೆಯಲ್ಲ. ತುಂಬಾ ಕಷ್ಟದ್ದು.

ಬೆಂಗಳೂರಿನಲ್ಲಿರುವ ಬಹುತೇಕ ಕಂಪನಿಗಳಲ್ಲಿ ತಿಂಡಿ ಮತ್ತು ಊಟದ ವ್ಯವಸ್ಥೆಯಿದೆ. ಒಂದೆರಡು ಮಾಧ್ಯಮ ಸಂಸ್ಥೆಗಳಲ್ಲಿದೆ. ಅರ್ಧ ದುಡ್ಡು ಸಿಬ್ಬಂದಿ ಕಟ್ಟಿದ್ರೆ, ಇನ್ನರ್ಧ ಸಂಸ್ಥೆ ಕಟ್ಟುತ್ತೆ. ಈ ವಿಷಯ ಈಗ್ಯಾಕೆ ಪ್ರಸ್ತಾಪ ಅಂದ್ರೆ, ನಮ್ಮಲ್ಲಿರುವ ಎಲ್ಲ ಸ್ಯಾಟ್ ಲೈಟ್ ಚಾನೆಲ್ ಗಳು ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು ಈ ತರಹದ ಕ್ಯಾಂಟೀನ್ ವ್ಯವಸ್ಥೆ ಮಾಡಿದ್ರೆ, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಹೊಸಬರಿಗೆ, ರೂಮಿನಲ್ಲಿರುವವರಿಗೆ ಬಹುದೊಡ್ಡ ಸಹಾಯವಾಗುತ್ತೆ. ಎಷ್ಟೇ ಸಮಯವಾದ್ರು ಊಟ ಸಿಗುತ್ತೆ ಅನ್ನೋ ಭರವಸೆಯಿರುತ್ತೆ. ನಾನು ನೋಡಿದಂತೆ ಕೆಲ ಸಂಸ್ಥೆಗಳಲ್ಲಿ ಕ್ಯಾಂಟೀನ್ ವ್ಯವಸ್ಥೆ ಕೂಡ ಇಲ್ಲ. ಆಚೆ ಹೋಗಿ ತಿಂದುಕೊಂಡು ಬರಬೇಕು. ಹೀಗಾಗಿ ಅದೆಷ್ಟೋ ಜನ ಸರಿಯಾದ ಟೈಂಗೆ ಊಟ ಮಾಡದೆ ಕೆಲಸ ಮಾಡ್ತಾರೆ.

ಬೆಳಗ್ಗೆ 8ಗಂಟೆ ಶಿಪ್ಟ್ ಗೆ ಬರಬೇಕಾದವರು 6ಗಂಟೆಗೆದ್ದು ಬೆಳಗಿನ ಕಾರ್ಯಗಳನ್ನ ಮುಗಿಸಿಕೊಂಡು ಬೈಕ್ ಏರಿ ಬಂದ್ರೂ ಆಫೀಸ್ ಟೈಂ ಆಗಿರುತ್ತೆ. ಟಿಫನ್ ಮಾಡಕ್ಕೆ ಆಮೇಲೆ ಹೋಗಬಹುದು. ಆದ್ರೆ, ಸಮಸ್ಯೆ ಬರೋದು ದುಡ್ಡಿನದ್ದು. ಮಧ್ಯಾಹ್ನ ಊಟ ಸಹ ಆಚೆ. ಸೆಕೆಂಡ್ ಶಿಫ್ಟ್ ನಲ್ಲಿ ಬರುವವರು ರೂಮಿನಲ್ಲಿ ಟಿಫನ್ ಹಾಗೂ ಊಟ ಮುಗಿಸಿಕೊಂಡು ಬರಬಹುದು. ರಾತ್ರಿ ಮನೆಗೆ ಹೋಗುವಷ್ಟರಲ್ಲಿ ಕನಿಷ್ಟ 12.30ರ ಮೇಲಾಗಿರುತ್ತೆ. ಕೆಲವರಂತೂ 1ಗಂಟೆಗೆ ಹೋಗಿ ರೂಮ್ ಸೇರ್ತಾರೆ. ಅಷ್ಟೊತ್ತಿನಲ್ಲಿ ಊಟ ಮಾಡಬೇಕು. ರೂಮಿನಲ್ಲಿ ಬೆಳಗ್ಗೆ ಮಾಡಿದ್ದು ಇದ್ರೆ ಓಕೆ. ಇಲ್ದೇ ಹೋದ್ರೆ, ಆಫೀಸ್ ನಿಂದ ಬರುವಾಗ್ಲೇ ಅಲ್ಲಿಇಲ್ಲಿ ಹುಡ್ಕಿ ಊಟ ತಂದಿರ್ತಾರೆ. ಈ ಪರಿಸ್ಥಿತಿ ಎದುರಿಸಿರುವ ನಾನು, ಈ ಬಗ್ಗೆ ಎಷ್ಟೋ ಸಾರಿ ಯೋಚಿಸಿದ್ದೇನೆ.

ನಾನು ಹೇಳುವ ವಿಚಾರ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಗೆ ಸಣ್ಣದು ಅನಿಸಬಹುದು ಅಥವ ಅವರಿಗೆ ಸಂಬಳ ಕೊಡ್ತೀವಿ. ಊಟಕ್ಕೂ ನಾವ್ಯಾಕೆ ದುಡ್ಡು ಕೊಡಬೇಕು ಅಂತಾ ಪ್ರಶ್ನೆ ಮಾಡಬಹುದು. ಆದ್ರೆ, ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವವರ ಸಂಬಳ ಮತ್ತು ಪರಿಸ್ಥಿತಿ ಒಂದೇ ರೀತಿ ಇರೋದಿಲ್ಲ. ಕೆಲವರು ಸ್ಥಿತಿವಂತರಿದ್ದು, ಕುಟುಂಬದ ಕಡೆಯಿಂದ ಸಮಸ್ಯೆಯಿಲ್ಲ ಅಂದ್ರೆ, ಬರೋ ಸಂಬಳ ಪೂರ್ತಿ ಖರ್ಚು ಮಾಡಬಹುದು. ಈ ಸಂಖ್ಯೆ ಅತ್ಯಂತ ಕಡಿಮೆ ಅನ್ನೋದು ನನ್ನ ಅಭಿಪ್ರಾಯ. ಸಿಬ್ಬಂದಿ ಬಗ್ಗೆ ಸಂಸ್ಥೆ ತೋರಿಸುವ ಕಾಳಜಿ ಸಹ ಮುಖ್ಯವಾಗುತ್ತೆ. ನನ್ನನ್ನೂ ಸೇರಿದಂತೆ ಅನೇಕ ಜನ ಸ್ನೇಹಿತರು ಈ ಸಮಸ್ಯೆಯನ್ನ ಎದುರಿಸಿದ್ದಾರೆ. ಎದುರಿಸ್ತಿದ್ದಾರೆ.

2013ರಲ್ಲಿ ನಾನು ಟಿವಿ9ನಲ್ಲಿ ಕೆಲಸಕ್ಕೆ ಸೇರಿಕೊಂಡು ಬೆಂಗಳೂರಿಗೆ ಬಂದು ಪಿಜಿಗೆ ಸೇರಿದೆ. ಅಲ್ಲಿ ಕೊಡುವ ಟಿಫನ್ ಮತ್ತು ಊಟ ತಿಂದ ಮೇಲೆ ಮನೆ ಊಟದ ರುಚಿ ಅರ್ಥವಾಗಿದ್ದು. ಆರಂಭದ ಮೂರ್ನಾಲ್ಕು ತಿಂಗಳು ನನ್ನ ಪರಮಾಪ್ತ ಸ್ನೇಹಿತ ಶಬ್ಬೀರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದ್ದೇನೆ. ಅನಿವಾರ್ಯವಾಗಿ ಪಿಜಿಗೆ ಹೊಂದಿಕೊಂಡ್ಮೇಲೆ ಬೆಳಗ್ಗಿನ ಶಿಪ್ಟ್ ಇದ್ರೆ, ತಿಂಡಿಯನ್ನೇ ಎರಡು ಟೈಂಗೆ ಆಗುವಷ್ಟು ಕಟ್ಟಿಕೊಂಡು ಹೋಗ್ತಿದ್ದೆ. ಟಿಫನ್ ಟೈಂನಲ್ಲಿ ಒಂದಿಷ್ಟು ತಿಂದು, ಉಳಿದ್ದಿದ್ದು ಮಧ್ಯಾಹ್ನ ತಿನ್ನುವುದು. ಯಾಕಂದ್ರೆ ಸಂಜೆ ರೂಮು ಸೇರುವಷ್ಟರಲ್ಲಿ 7 ಗಂಟೆಯಾಗ್ತಿತ್ತು. ಮತ್ತೆ ಮುಂಜಾನೆ ಆಫೀಸ್ ಗೆ ಓಡೋದು. ಇನ್ನು ಸೆಕೆಂಡ್ ಶಿಪ್ಟ್ ಇದ್ದ ಟೈಂನಲ್ಲಿ ಮತ್ತೊಂದು ಸಮಸ್ಯೆ. ಪಿಜಿಯಲ್ಲಿ ಮಧ್ಯಾಹ್ನ ಊಟ ಇರೋದಿಲ್ಲ. ಬೆಳಗ್ಗಿನ ತಿಂಡಿಯನ್ನ ಎತ್ತಿಟ್ಟುಕೊಳ್ಳುವುದು. ಅದನ್ನ ಮಧ್ಯಾಹ್ನ ತಿಂದು ಆಫೀಸ್ ಗೆ ಹೋಗುವುದು. ಬೇಸರವಾಗಿದ್ದ ದಿನ ಬೆಂಗಳೂರಿನ ಫೇಮಸ್ 20 ರೂಪಾಯಿಯ ಚಿತ್ರನ್ನ ಸವಿಯುವುದು. ಇನ್ನು ರಾತ್ರಿ ಬರುವಷ್ಟರಲ್ಲಿ ಪಿಜಿ ಅವರು ಒಂದೇ ಪ್ಲೇಟ್ ನಲ್ಲಿ ಚಪಾತಿ, ಪಲ್ಯ, ಅನ್ನ, ಸಾರು ಹಾಕಿಟ್ಟಿರುತ್ತಿದ್ರು. ಚಪಾತಿ ನೆನೆದು ಹೋಗಿರೋದು.

ಈ ಪಿಜಿ ಗೋಳಿನಿಂದ ಆಚೆ ಬರಲು ಸ್ನೇಹಿತರ ಜೊತೆ ರೂಮು ಮಾಡಿದ್ಮೇಲೆ ಆದ ಅನುಭವಗಳು ಇನ್ನೂ ಭಯಂಕರ. ಅದರ ಸಹವಾಸ ಬಿಟ್ಟು ಏಕಾಂಗಿಯಾಗಿ ಸಿಂಗಲ್ ಬೆಡ್ ರೂಮ್ ಮನೆ ಮಾಡಿ ಕಳೆದ ದಿನಗಳಿವೆ. ಈ ಸ್ಥಿತಿಗೆ ತಲುಪುವಷ್ಟರಲ್ಲಿ ನಾಲ್ಕೈದು ವರ್ಷಗಳು ಉರುಳಿದ್ವು. ಇದು ಬರೀ ಊಟದ ವಿಚಾರ ಹೇಳಿದೆ. ಇಂಥಾ ಅದೆಷ್ಟೋ ವಿಚಾರಗಳಲ್ಲಿ ಹೊಸಬರು ಹೊಂದಾಣಿಕೆ ಮಾಡಿಕೊಳ್ತಾರೆ. ಜೀವನ ಅಂದ್ರೆ ಏನು ಅನ್ನೋ ಪಾಠ ಆಗ ಅರ್ಥವಾಗುತ್ತೆ. ಹೀಗಾಗಿ ನನ್ನ ಕೋರಿಕೆ ಏನಂದ್ರೆ, ಟೈಂ ಬಗ್ಗೆ ಯಾವತ್ತೂ ಕೇರ್ ಮಾಡದೇ ಕೆಲಸ ಮಾಡುವ ಮಾಧ್ಯಮ ಸಂಗಾತಿಗಳಿಗೆ ಹೊತ್ತಿಗೆ ಸರಿಯಾಗಿ ಊಟ ಸಿಗುವ ವ್ಯವಸ್ಥೆಯಾಗಬೇಕು ಅನ್ನೋದು.

ಇದು ಒಂದು ದಿನದ ಸಮಸ್ಯೆ ಅಲ್ಲ. ವರ್ಷಾನುಗಟ್ಟಲೆ ಎದುರಿಸುವ ಸಮಸ್ಯೆ. ಇದ್ರಿಂದಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುವ ಪತ್ರಕರ್ತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಾಧ್ಯಮ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿಚಾರ ಮಾಡಬೇಕಿದೆ. ಪೂರ್ತಿ ಉಚಿತ ವ್ಯವಸ್ಥೆ ಮಾಡುವುದು ಬೇಡ. ಅರ್ಧ ಸಂಸ್ಥೆ ಕಟ್ಟುವುದು, ಇನ್ನರ್ಧ ಸಿಬ್ಬಂದಿ ಕಟ್ಟುವುದು. ಇದಕ್ಕಾಗಿ ಕೋಪನ್ ಪದ್ಧತಿ ಮಾಡಿದ್ರೆ ಅವಶ್ಯಕತೆಯಿದ್ದವರು ಉಪಯೋಗ ಪಡೆದುಕೊಳ್ತಾರೆ. ಎಷ್ಟೋ ಸಿಬ್ಬಂದಿಗೆ ಆರ್ಥಿಕ ಸಹಾಯವಾಗುತ್ತೆ. ನೆಮ್ಮದಿಯಾಗಿ ಒಂದು ತುತ್ತು ಊಟ ಮಾಡಬಹುದು.

ನಿಮ್ಮ ಅಭಿಪ್ರಾಯ ಇಲ್ಲಿಗೆ ಕಳುಹಿಸಿ prajaastra18@gmail.com




Leave a Reply

Your email address will not be published. Required fields are marked *

error: Content is protected !!